ಅಪಘಾತ ತಡೆಗೆ 11 ಸಾವಿರ ಕೋ.ರೂ. ವೆಚ್ಚ: ನಿತಿನ್ ಗಡ್ಕರಿ
ಹೊಸದಿಲ್ಲಿ, ಜ.11: ದೇಶದಲ್ಲಿ ಬೆಚ್ಚಿ ಬೀಳಿಸುವಷ್ಟು ಸಂಖ್ಯೆಯ ರಸ್ತೆ ಅಪಘಾತಗಳ ಕುರಿತು ಕಳವಳಗೊಂಡಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ರಸ್ತೆ ಮೂಲಸೌಕರ್ಯದ ಸುಧಾರಣೆಗಾಗಿ ಸರಕಾರವು ಮುಂದಿನ 5 ವರ್ಷಗಳಲ್ಲಿ ರೂ.11ಸಾವಿರ ಕೋಟಿ ವೆಚ್ಚ ಮಾಡಲಿದೆಯೆಂದು ಇಂದಿಲ್ಲಿ ಹೇಳಿದ್ದಾರೆ.
ರಸ್ತೆ ಅಪಘಾತಗಳಿಂದ ದೇಶಕ್ಕೆ ವಾರ್ಷಿಕ ಸುಮಾರು ರೂ.60 ಸಾವಿರ ಕೋಟಿ ಅಥವಾ ಒಟ್ಟು ದೇಶೀಯ ಉತ್ಪನ್ನದ (ಜೆಡಿಪಿ) ಶೇ.3ರಷ್ಟು ನಷ್ಟವಾಗುತ್ತಿದೆ ಎಂದ ಅವರು ಅಂತಹ ದುರಂತಗಳನ್ನು ಕಡಿಮೆಗೊಳಿಸಲು ಕೇಂದ್ರ ಸರಕಾರವು ಅನೇಕ ಕ್ರಮಗಳನ್ನು ಆರಂಭಿಸಿದೆ ಎಂದಿದ್ದಾರೆ.
ವರ್ಷಕ್ಕೆ ದೇಶದಲ್ಲಿ 5 ಲಕ್ಷ ಅಪಘಾತಗಳು ಸಂಭವಿಸುತ್ತವೆ. ಅವುಗಳಲ್ಲಿ1.5 ಲಕ್ಷ ಜನ ಅಸುನೀಗಿ, ಇತರ 3 ಲಕ್ಷದಷ್ಟು ಮಂದಿ ಶಾಶ್ವತ ಅಂಗವಿಕಲರಾಗುತ್ತಿದ್ದಾರೆ. ಯುದ್ಧಗಳಲ್ಲೂ ಇಷ್ಟು ಮಂದಿ ಸಾಯುವುದಿಲ್ಲ. ಇದೊಂದು ಗಂಭೀರ ಕಳವಳವಾಗಿದೆಯೆಂದು ಗಡ್ಕರಿ ತಿಳಿಸಿದ್ದಾರೆ.
ಇಂಡಿಯಾ ಗೇಟ್‌ನಿಂದ ‘ವಾಕಥಾನ್’ ಮೂಲಕ ‘ರಸ್ತೆ ಸುರಕ್ಷಾ ಸಪ್ತಾಹಕ್ಕೆ’ ಚಾಲನೆ ನೀಡಿದ ಗಡ್ಕರಿ, ಸರಕಾರವು ದಿಲ್ಲಯಲ್ಲಿ 10 ಪ್ರಮುಖ ಅಪಘಾತ ವಲಯಗಳನ್ನು ಗುರುತಿಸಿ ಕೆಲಸ ಆರಂಭಿಸಿದೆಯೆಂದರು.
ಗುರುತಿಸಲಾಗಿರುವ ವಲಯಗಳಲ್ಲಿ, ಸರಾಯಿ ಕಾಲೇ ಖಾನ್, ಕಾಶ್ಮೀರ್ ಗೇಟ್ ಚೌಕ್ (ಮೋರಿ ಗೇಟ್), ನಿಗಂ ಭೋಧ್ ಘಾಟ್, ಮುಕುಂದಪುರ ಚೌಕ್, ಡಾ.ಭಾಭಾ ಮಾರ್ಗ್ ಕ್ರಾಸಿಂಗ್, ಪಂಜಾಬಿ ಬಾಗ್ ಚೌಕ್, ಐಎಸ್‌ಬಿಟಿ ಕಾಶ್ಮೀರ್ ಗೇಟ್, ಮಹೀಪಾಲಪುರ ಮೇಲ್ಸೇತುವೆ, ಶನಿ ಮಂದಿರ ಹಾಗೂ ಶಹದಾರಾ ಮೇಲ್ಸೇತುವೆಗಳು ಸೇರಿವೆ.
ದೇಶದಲ್ಲಿ ಶೇ.30ರಷ್ಟು ಚಾಲನಾ ಪರವಾನಿಗೆಗಳು ನಕಲಿಯಾಗಿರುವುದು ದುರದೃಷ್ಟ ಎಂದ ಅವರು, ಪರವಾನಿಗೆ ನೀಡಿಕೆ ವ್ಯವಸ್ಥೆಯನ್ನು ವಿದ್ಯುನ್ಮಾನೀಕರಿಸಲಾಗುವುದು ಎಂದರು. ವಾಹನಗಳಲ್ಲಿ ಸುರಕ್ಷಾ ಕ್ರಮಗಳ ಕುರಿತು ಮಾತನಾಡಿದ ಗಡ್ಕರಿ, ಏರ್‌ಬ್ಯಾಗ್ ಇಲ್ಲದ ಕಾರುಗಳನ್ನು ನಿರ್ಮಿಸುವುದಿಲ್ಲ ಹಾಗೂ ಟ್ರಕ್‌ಗಳ ಕ್ಯಾಬಿನ್‌ನಲ್ಲಿ ಕಡ್ಡಾಯವಾಗಿ ಹವಾನಿಯಂತ್ರಿಕ ಜೋಡಣೆಗಳಿರಬೇಕು ಎಂದು ಸ್ಪಷ್ಟಪಡಿಸಿದರು.
ಸಂಸತ್ತು ಶೀಘ್ರವೇ ರಸ್ತೆ ಅಪಘಾತ ಕಡಿಮೆಗೊಳಿಸಲು ಹಲವು ಕ್ರಮಗಳಿರುವ ರಸ್ತೆ ಸಾರಿಗೆ ಹಾಗೂ ಸುರಕ್ಷಾ ಮಸೂದೆಯನ್ನು ಮಂಜೂರು ಮಾಡುವುದೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಯೋಜನೆ: ಗಡ್ಕರಿಯೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ
ಹೊಸದಿಲ್ಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಸೋಮವಾರ ಹೊಸದಿಲ್ಲಿಯ ಸಾರಿಗೆ ಭವನದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿಗತಿ, ಅಭಿವೃದ್ಧಿ ಹಾಗೂ ಹೊಸ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸಿ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.
ರಾಜ್ಯದಲ್ಲಿ 2,573 ಕಿ.ಮೀ ಉದ್ದದ ಹೊಸ ಹೆದ್ದಾರಿಗಳ ವಿವರವಾದ ಯೋಜನಾ ವರದಿ ತಯಾರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಮ್ಮತಿ ಬಾಕಿಯಿರುವುದನ್ನು ಕೇಂದ್ರ ಸಚಿವರ ಗಮನಕ್ಕೆ ಮುಖ್ಯಮಂತ್ರಿ ತಂದರು. ಕೊರಟಗೆರೆ-ಬಾವಲಿ ರಾಜ್ಯ ಹೆದ್ದಾರಿ-33ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ನಿಧಿಯಿಂದ 38 ಕೋಟಿ ರೂ.ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಆರ್ಥಿಕ ಪ್ರಾಮುಖ್ಯತೆ ಅಡಿಯಲ್ಲಿ 40 ಕೋಟಿ ರೂ. ವೆಚ್ಚದ ಮತ್ತು ಅಂತರ್ ರಾಜ್ಯ ಸಂಪರ್ಕದ ಯೋಜನೆ ಅಡಿ 43 ಕೋಟಿ ರೂ.ಗಳ ಯೋಜನೆಗಳನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡುವಂತೆ ಅವರು ಕೋರಿದರು.