ಎ.ಸಿ. ಕಚೇರಿಯ ಆಸ್ತಿ ಮುಟ್ಟುಗೋಲು

Update: 2016-01-11 18:32 GMT

ಬಜ್ಪೆ ವಿಮಾನ ನಿಲ್ದಾಣ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶ
ಮಂಗಳೂರು, ಜ.11: ಬಜ್ಪೆ ವಿಮಾನ ನಿಲ್ದಾಣ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿನ ನ್ಯಾಯಾಲಯವು ಮಂಗಳೂರು ಸಹಾಯಕ ಕಮಿಷನರ್ (ಎ.ಸಿ.) ಕಚೇರಿಯ ಚರಾಸ್ತಿಯನ್ನು ಮುಟ್ಟುಗೋಲಿಗೆ ಆದೇಶ ನೀಡಿದೆ. ಅದರಂತೆ ಕಾರ್ಯಾಚರಣೆ ನಡೆಸಿದ ಶಿರಸ್ತೇದಾರ್ ಹಾಗೂ ಅಧಿಕಾರಿಗಳ ತಂಡ ಇಂದು ಎ.ಸಿ. ಕಚೇರಿಯಲ್ಲಿದ್ದ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಜ್ಪೆಯ ಅದ್ಯಪಾಡಿಯಲ್ಲಿರುವ ಜೋಸೆಫ್ ಡಿಸೋಜ ಕುಟುಂಬವು 2005ರಲ್ಲಿ ಬಜ್ಪೆ ವಿಮಾನ ನಿಲ್ದಾಣ ರನ್‌ವೇಗಾಗಿ ತಮ್ಮ 4.5 ಎಕರೆ ಕೃಷಿ ಭೂಮಿಯನ್ನು ನೀಡಿದ್ದರು. ಸರಕಾರ ಭೂಸ್ವಾಧೀನ ಮಾಡಿದ್ದ ಇವರ ಕೃಷಿ ಭೂಮಿಗೆ ಪರಿಹಾರವಾಗಿ 59 ಲಕ್ಷ ರೂ.ನ್ನು ಪಾವತಿಸುವಂತೆ ಆದೇಶಿಸಲಾಗಿತ್ತು. ಆದರೆ, ಮೊದಲ ಕಂತಿನ ಹಣ ವಾಗಿ ಕೇವಲ 13 ಲಕ್ಷ ರೂ.ನ್ನು ಮಾತ್ರ ಪಾವತಿಸಲಾಗಿತ್ತು. ಅನಂತರ ವರ್ಷಗಳು ಕಳೆದರೂ ಜೋಸೆಫ್ ಕುಟುಂಬಕ್ಕೆ ಬಾಕಿ ಪರಿಹಾರದ ಮೊತ್ತ ಸಂದಾಯವಾಗಿರಲಿಲ್ಲ. ಈ ಬಗ್ಗೆ ಜೋಸೆಫ್ ಕುಟುಂಬವು ಸಂಬಂಧ ಪಟ್ಟ ಇಲಾಖೆಯನ್ನು ಅಲೆದಾಡಿದ್ದರು. ಯಾವುದೇ ಪ್ರಯೋಜನ ಕಾಣದಿದ್ದಾಗ ಕುಟುಂಬವು ಅನಿವಾರ್ಯವಾಗಿ ಕೋರ್ಟ್‌ನ ಮೊರೆ ಹೋಗಿತ್ತು.
ಬಾಕಿ ಮೊತ್ತವನ್ನು ಕೂಡಲೇ ಪಾವತಿಸುವಂತೆ ನ್ಯಾಯಾಲಯವು ರೆವೆನ್ಯೂ ಇಲಾಖೆಗೆ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದ ಹೊರತಾಗಿಯೂ ಜೋಸೆಫ್ ಕುಟುಂಬಕ್ಕೆ ಕಂದಾಯ ಇಲಾಖೆ ಬಾಕಿ ಮೊತ್ತವನ್ನು ಪಾವತಿಸಿರಲಿಲ್ಲ. ಇದರಿಂದಾಗಿ ಬೇಸತ್ತ ಜೋಸೆಫ್ ಕುಟುಂಬ ಮತ್ತೊಮ್ಮೆ ಕೋರ್ಟ್ ಮೋರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಇಂದು ಬೆಳಗ್ಗೆ ಎ.ಸಿ. ಕಚೇರಿಗೆ ಆಗಮಿಸಿದ ಅಧಿಕಾರಿಗಳು ಅಲ್ಲಿನ ಕಂಪ್ಯೂಟರ್‌ಗಳು, ಎ.ಸಿ.ಯವರ ಸ್ಕಾರ್ಫಿಯೋ ಕಾರು, 18 ಮೇಜು ಗಳು, 27 ಕಪಾಟುಗಳು, ಪೀಠೋ ಪಕರಣಗಳು, ಇಲಾಖೆಗೆ ಸಂಬಂಧಿಸಿದ ಫೈಲ್ ಮತ್ತಿತರ ಸಾಮಗ್ರಿಗಳನ್ನು ಕೊಂಡೊಯ್ದಿದ್ದಾರೆ.
ಅಲ್ಲದೆ, 15 ದಿನಗಳೊಳಗೆ ಪರಿಹಾ ರದ ಮೊತ್ತವನ್ನು ಪಾವತಿಸುವಂತೆ ಕೋರ್ಟ್ ಎ.ಸಿ.ಗೆ ಸೂಚನೆ ನೀಡಿದೆ ಯಲ್ಲದೆ, ಇಲ್ಲದಿದ್ದಲ್ಲಿ, ಮುಟ್ಟುಗೋಲು ಹಾಕಲಾಗಿದ್ದ ಚರಾಸ್ತಿಗಳನ್ನು ಸಾರ್ವ ಜನಿಕವಾಗಿ ಹರಾಜು ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.

ಸರಕಾರದಿಂದ ತುರ್ತು ಕ್ರಮ: 34 ಕೋ.ರೂ. ಪರಿಹಾರ ಬಿಡುಗಡೆ
ಮಂಗಳೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಭೂಸ್ವಾಧೀನವಾಗಿದ್ದ ಭೂಮಾಲಕರಿಗೆ ರಾಜ್ಯ ಸರಕಾರವು 34 ಕೋ.ರೂ. ಪರಿಹಾರವನ್ನು ಇಂದು ಬಿಡುಗಡೆ ಮಾಡಿ ಆದೇಶಿಸಿದೆ.
ವಿಮಾನ ನಿಲ್ದಾಣದ 2ನೆ ರನ್ ವೇ ವಿಸ್ತರಣೆಗೆ 1990ರಲ್ಲಿ ಭೂಸ್ವಾಧೀನ ಮಾಡಲಾಗಿತ್ತು. ಆದರೆ ಹೆಚ್ಚುವರಿ ಪರಿಹಾರ ಕೋರಿ ಭೂಮಾಲಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು 77 ಮೊಕದ್ದಮೆಯಲ್ಲಿ ಸುಮಾರು 34 ಕೋ.ರೂ. ಪರಿಹಾರ ನೀಡಲು ಆದೇಶಿಸಿತ್ತು.
ಈ ಪರಿಹಾರ ಪಾವತಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಮಧ್ಯೆ ಪರಿಹಾರ ಪಾವತಿಸಿಲ್ಲ ಎಂದು ಭೂಮಾಲಕರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಮಂಗಳೂರು ಎ.ಸಿ. ಕಚೇರಿಯ ಚರಸೊತ್ತುಗಳನ್ನು ಮುಟ್ಟುಗೋಲಿಗೆ ನ್ಯಾಯಾಲಯ ಆದೇಶಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ 34 ಕೋ.ರೂ. ಪರಿಹಾರವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿ ಇಂದು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News