ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಕಿಡ್ನಿ ಹರಾಜಿಗಿಟ್ಟ ಸ್ಕ್ವಾಷ್ ಆಟಗಾರ !
ಹೊಸದಿಲ್ಲಿ, ಜ.12: ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 2010ರಲ್ಲಿ ಮೊದಲ ಚಿನ್ನ ಜಯಿಸಿದ ಭಾರತದ ಸ್ಕ್ವಾಷ್ ಆಟಗಾರ ರವಿ ದೀಕ್ಷಿತ್ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಖರ್ಚಿಗೆ ಕೈಯಲ್ಲಿ ಹಣ ಇಲ್ಲದ ಕಾರಣಕ್ಕಾಗಿ ತನ್ನ ಕಿಡ್ನಿಯನ್ನು ಹರಾಜಿಗಿಟ್ಟಿದ್ದಾರೆ.
ಉತ್ತರಪ್ರದೇಶದ ಧಂಪುರದ ನಿವಾಸಿ 23ರ ಹರೆಯದ ರವಿಗೆ ಇಷ್ಟರ ತನಕ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಹಣ ಹೊಂದಿಸುವುದಕ್ಕಾಗಿ ಪ್ರಾಯೋಜಕರು ಸಿಕ್ಕಿಲ್ಲ. ಇದರಿಂದಾಗಿ ನೊಂದುಕೊಂಡಿರುವ ರವಿ ಫೇಸ್ ಬುಕ್ ಮತ್ತು ಟ್ವಿಟರ್‌ನಲ್ಲಿ 8ಲಕ್ಷ ರೂ. ನೀಡಿದರೆ ತನ್ನ ಕಿಡ್ನಿಯನ್ನು ನೀಡುವುದಾಗಿ ಹೇಳಿದ್ದಾರೆ
ರವಿ 10 ವರ್ಷಗಳಿಂದ ಸ್ಕ್ವಾಷ್ ಆಡುತ್ತಿದ್ದಾರೆ. ರವಿ ಸೇರಿದಂತೆ 4 ಮಂದಿ ಆಟಗಾರರು ಫೆಬ್ರವರಿಯಲ್ಲಿ ಗುವಾಹತಿಯಲ್ಲಿ ನಡೆಯಲಿರುವ ದಕ್ಷಿಣ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ.
ರವಿ ತಂದೆ ಧಂಪುರ ಸಕ್ಕರೆ ಕಾರ್ಖಾನೆಯಲ್ಲಿ ನಾಲ್ಕನೆ ದರ್ಜೆ ನೌಕರ. ಇಷ್ಟರ ತನಕ ಅವರಿಗೆ ಈ ಸಂಸ್ಥೆ ಆರ್ಥಿಕ ಸಹಾಯ ಒದಗಿಸುತ್ತಿತ್ತು. ಇದೀಗ ಅವರಿಗೆ ಹಣಕಾಸಿನ ಅಡಚಣೆ ಉಂಟಾಗಿದೆ. ಟೂರ್ನಮೆಂಟ್‌ಗಳಲ್ಲಿ ಜಯ ಗಳಿಸಿದರೆ ಸಿಗುವ ನಗದನ್ನು ತರಬೇತಿಗಾಗಿ ಬಳಸುತ್ತಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಖರ್ಚಿಗೆ ಕನಿಷ್ಠ ಒಂದು ಲಕ್ಷ ರೂ. ಅಗತ್ಯ. ಆದರೆ ಈ ತನಕ ಪ್ರಾಯೋಜಕರು ಸಿಕ್ಕಿಲ್ಲ. ಈ ಕಾರಣದಿಂದಾಗಿ ತನ್ನ ಕಿಡ್ನಿಯನ್ನು 8 ಲಕ್ಷ ರೂ.ಗೆ ಮಾರಾಟ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ರವಿ ದೀಕ್ಷಿತ್ ತಿಳಿಸಿದ್ದಾರೆ.