ಪಾಕ್‌ಗೆ ಯುದ್ಧ ವಿಮಾನ ಮಾರಾಟಕ್ಕೆ ತಡೆ
ಅಮೆರಿಕ ಸಂಸತ್ ನಿರ್ಧಾರ
ವಾಶಿಂಗ್ಟನ್, ಜ.12: ಪಾಕಿಸ್ತಾನಕ್ಕೆ 8 ಹೊಸ ಎಫ್-16 ಯುದ್ಧ ವಿಮಾನಗಳ ಉದ್ದೇಶಿತ ಮಾರಾಟವನ್ನು ಅಮೆರಿಕದ ಸಂಸತ್ತು ‘ತಡೆಹಿಡಿದಿದೆ’ ಎಂದು ಸಂಸತ್ತು ಹಾಗೂ ರಾಜತಾಂತ್ರಿಕ ಮೂಲಗಳನ್ನುಲ್ಲೇಖಿಸಿ ಪಾಕಿಸ್ತಾನದ ‘ಡಾನ್’ ಪತ್ರಿಕೆ ಮಂಗಳವಾರ ವರದಿ ಮಾಡಿದೆ.
ಪಾಕಿಸ್ತಾನದಿಂದ ಎಫ್-16 ಯುದ್ಧ ವಿಮಾನಗಳ ಕೊನೆಯ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕದ ಸಂಸದರು, ಅವುಗಳ ಮಾರಾಟವನ್ನು ವಿಳಂಬಿಸಲು ಸ್ಪಷ್ಟೀಕರಣ ಹಾಗೂ ಮಾಹಿತಿ ನೋಟಿಸ್‌ಗಳನ್ನು ಉಪಯೋಗಿಸಿದ್ದಾರೆ.
ಸೆನೆಟ್‌ನಿಂದಲೂ ಒಬಾಮ ಆಡಳಿತಕ್ಕೆ ‘ತಡೆಹಿಡಿಯಿರಿ’ ನೋಟಿಸ್ ಬಂದಿದೆಯೆಂದು ಡಾನ್ ತಿಳಿಸಿದೆ.
ಆದಾಗ್ಯೂ, ಎಫ್-16ಗಳ ಮಾರಾಟವನ್ನು ಕೇವಲ ‘ತಡೆಹಿಡಿಯಲಾಗಿದೆ’ಯಷ್ಟೇ. ಆಡಳಿತವು ಅದಕ್ಕಾಗಿ ಒತ್ತಡ ಹೇರಿದರೆ ವ್ಯಾಪಾರ ಮತ್ತೆ ಕುದುರುವ ಸಾಧ್ಯತೆಯಿದೆ.
ಪಾಕಿಸ್ತಾನದೊಳಗಿನ ಭಯೋತ್ಪಾದಕ ಗುಂಪುಗಳು ಹಾಗೂ ವ್ಯಕ್ತಿಗಳು ಪಠಾಣ್‌ಕೋಟ್ ವಾಯು ನೆಲೆಯ ಮೇಲಿನ ದಾಳಿಯನ್ನು ಯೋಜಿಸಿ, ಕಾರ್ಯಗತಗೊಳಿಸಿದ್ದಾರೆಂಬ ಭಾರತದ ಗುಪ್ತಚರ ವರದಿಗಳ ನಡುವೆಯೇ, ಪಾಕಿಸ್ತಾನವು ಮುಂಬೈ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಾದಂತೆ ಅವರನ್ನು ರಕ್ಷಿಸಲು ನೆಪಗಳನ್ನು ಹೇಳಬಾರದೆಂದು ರಾಜ್ಯಾಂಗ ಇಲಾಖೆಯ ಹಿರಿಯಧಿಕಾರಿಯೊಬ್ಬರು ಹೇಳಿದ್ದಾರೆ.