×
Ad

ತ.ನಾಡು ಸಮುದ್ರ ತೀರದಲ್ಲಿ ರಾಶಿ ತಿಮಿಂಗಿಲಗಳ ಸಾವು

Update: 2016-01-12 23:52 IST

ಚೆನ್ನೈ, ಜ.12: ಹವಾಮಾನ ಬದಲಾವಣೆಯ ಇನ್ನೊಂದು ಪರಿಣಾಮವಾಗಿ ಸುಮಾರು 50 ತಿಮಿಂಗಿಲಗಳು ಹಾಗೂ ಡಾಲ್ಫಿನ್‌ಗಳು ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕಡಲ ತಡಿಗೆ ಅಪ್ಪಳಿಸಿವೆ. ಅಧಿಕಾರಿಗಳು ಹಾಗೂ ಬೆಸ್ತರು ಅವುಗಳನ್ನು ಮರಳಿ ಸಮುದ್ರಕ್ಕೆ ಬಿಟ್ಟರೂ, ತಿಮಿಂಗಿಲಗಳು ಮತ್ತೆ ತೀರಕ್ಕೆ ಬಂದಿವೆ.

ನೂರಾರು ತಿಮಿಂಗಿಲಗಳ ಅಸ್ಥಿಪಂಜರಗಳು ತೀರವನಪ್ಪಳಿಸಿದುದು ಪತ್ತೆಯಾಗಿದ್ದರೆ, 250ರಷ್ಟು ತಿಮಿಂಗಿಲಗಳು ಆಳವಿಲ್ಲದ ನೀರಿನಲ್ಲಿ ಸಿಲುಕಿಕೊಂಡಿವೆ. ಅದರ ಕಾರಣ ಪತ್ತೆಗಾಗಿ ಅರಣ್ಯ ಹಾಗೂ ಸಾಗರಜೀವಿ ಪರಿಣತರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸಿಲುಕಿರುವ ಸಮುದ್ರ ಸಸ್ತನಿಗಳನ್ನು ಆಳ ನೀರಿಗೆ ದೂಡುವ ಪ್ರಯತ್ನ ಪ್ರಗತಿಯಲ್ಲಿದ್ದು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತನಿಖೆಗಾಗಿ ಸ್ಥಳಕ್ಕೆ ಧಾವಿಸಿದ್ದಾರೆ.


ಇದು ಅಸಹಜ ವಿಷಯ ಹಾಗೂ ಅಸಹಜ ಸಾವಿನ ಘಟನೆಯಾಗಿದೆ. ನಾವು ಅದಕ್ಕೆ ಕಾರಣ ಹುಡುಕಬೇಕಾಗಿದೆಯೆಂದು ಮೀನುಗಾರಿಕೆ ಇಲಾಖೆಯ ಸಾಗರ ವಿಜ್ಞಾನಿ ವೇಲುಮಣಿ ಹೇಳಿದ್ದಾರೆ.


ಅದಕ್ಕೆ ಹಲವು ಕಾರಣಗಳಿರಬಹುದು. ನೌಕಾಪಡೆಯ ಸೋನಾರ್‌ಗಳು ಅಥವಾ ಜಲ ಮಾಲಿನ್ಯದಿಂದ ಹೀಗಾಗಿರಬಹುದು. ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ನಾವು ಊಹಿಸಬಯಸುವುದಿಲ್ಲವೆಂದು ತೂತ್ತುಕುಡಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಅಮಲ್ ಝೇವಿಯನ್ ತಿಳಿಸಿದ್ದಾರೆ.

ಸಿಲುಕಿಕೊಂಡಿರುವ ತಿಮಿಂಗಿಲಗಳ ಆರೋಗ್ಯ ಹಾಗೂ ಜೈವಿಕ ವ್ಯವಸ್ಥೆಯ ಬಗ್ಗೆ ನಾವು ಅಧ್ಯಯನ ನಡೆಸಬೇಕಾಗಿದೆ. ಈ ಅಧ್ಯಯನಕ್ಕೆ ಸಾಗರಶಾಸ್ತ್ರಜ್ಞರ ಸಹಾಯವು ಅಗತ್ಯವಾಗಬಹುದೆಂದು ವೇಲುಮಣಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News