ಮುಸ್ಲಿಮರನ್ನು ಅವಮಾನಿಸುವುದು ನಮಗೆ ಕ್ಷೇಮಕರವಲ್ಲ : ವಿದಾಯ ಭಾಷಣದಲ್ಲಿ ಒಬಾಮ
ವಾಷಿಂಗ್ಟನ್, ಜ.13: ಮುಸ್ಲಿಮರನ್ನು ಅವಮಾನಿಸುವುದು ನಮಗೆ ಕ್ಷೇಮಕರವಲ್ಲ. ಇದರಿಂದ ನಮ್ಮ ರಕ್ಷಣೆ ಅಸಾಧ್ಯ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಓಬಾಮ ಇಂದು ವಿದಾಯ ಭಾಷಣದಲ್ಲಿ ಹೇಳಿದರು.
ಅಮೆರಿಕದ ಸಂಸತ್ತನ್ನುದ್ದೇಶಿಸಿ ತಮ್ಮ ಕೊನೆಯ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಇದು ನನ್ನ ಕೊನೆಯ ಭಾಷಣವಾಗಿದ್ದರೂ, ಮೊದಲ ಭಾಷಣದಂತೆ ಅನ್ನಿಸುತ್ತಿದೆ ಎಂದರು.
ಅಮೆರಿಕದಲ್ಲಿ ಗನ್ ಅತ್ಯಂತ ಸುಲಭವಾಗಿ ದೊರೆಯುತ್ತಿದೆ.ಪಿಜ್ಜಾ ಖರೀದಿಸಿದಂತೆ ಗನ್ ಖರೀದಿಸಬಹುದಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಗನ್ ಖರೀದಿ ನೀತಿಯಲ್ಲಿ ಬದಲಾವಣೆ ಅಗತ್ಯ ಎಂದು ಅಭಿಪ್ರಾಯಪಟ್ಟರು
ಅಮೆರಿಕದಲ್ಲಿ ಗಂಭೀರ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಎಲ್ಲರ ಸಹಕಾರ ಅಗತ್ಯವಿದೆ. ಸಾಮಾಜಿಕ ಭದ್ರತೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಅಮೆರಿಕದ ಸೇನೆ ವಿಶ್ವದಲ್ಲೇ ಅತ್ಯಂತ ಬಲಿಷ್ಟವಾಗಿದೆ. ಸರ್ವಶ್ರೇಷ್ಟವಾಗಿದೆ. ಜಗತ್ತಿಗೆ ಕಂಟಕವಾಗಿರುವ ಇಸಿಸ್, ಅಲ್‌ಖೈದಾಗಳಂತಹ ಭಯೋತ್ಪಾದಕ ಸಂಘಟನೆಗಳನ್ನುಮಟ್ಟ ಹಾಕಲು ಅಮೆರಿಕ ಈಗಲೂ ಸಿದ್ದ. ಇಸಿಸ್ ವಿರುದ್ಧದ ಯುದ್ಧಕ್ಕೆ ಅಮೆರಿಕ ಯೋಧರು ಯಾವತ್ತೂ ಸಜ್ಜಾಗಿದ್ಧಾರೆ. ಎಂದು ಗುಡುಗಿದರು..
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲು ಇಸಿಸ್‌ನಿಂದ ಸಾಧ್ಯವಾಗಿಲ್ಲ. ಇಸಿಸ್‌ಗೆ ಅಮೆರಿಕ ವಿರುದ್ಧ ಏನನ್ನು ಮಾಡಲು ಸಾಧ್ಯವಾಗದು ಎಂದು ಒಬಾಮ ನುಡಿದರು..
"ನನ್ನ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ಅಮೆರಿಕ ದೇಶ ತೀವ್ರ ಸಂಕಷ್ಟದಲ್ಲಿತ್ತು. ದೇಶದ ಆಂತರಿಕ ಭದ್ರತೆಯೇ ಸವಾಲಾಗಿತ್ತು. ನನ್ನ ಅಧಿಕಾರಾವಧಿಯಲ್ಲಿ ಉದ್ಯೋಗವಕಾಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. 14 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಕಳೆದ 7 ವರ್ಷಗಳಲ್ಲಿ ಅಮೆರಿಕ ಆರ್ಥಿಕವಾಗಿ ವೃದ್ಧಿಯಾಗಿದೆ. ಅಮೆರಿಕ ಇಂದು ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿದೆ. ವಿಶ್ವದ ಆರ್ಥಿಕ ವ್ಯವಸ್ಥೆಗೆ ಮುನ್ನಡಿ ಬರೆದಿದೆ " ಎಂದರು.
ಅಮೆರಿಕದಲ್ಲಿ ಕ್ಯಾನ್ಸರ‍್ ನಿರ್ಮೂಲನೆಗೆ ಕ್ರಮಕೈಗೊಳ್ಳಲಾಗಿದೆ. ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆದ ಆಂಧೋಲನ ಅಪೂರ್ವವಾಗಿತ್ತು ಎಂದರು.
ಜಗತ್ತಿನ ಇತರ ದೇಶಗಳು ಇಂದು ಜಾಗತಿಕ ವಿಚಾರದಲ್ಲಿ ಅಮೆರಿಕದ ನಾಯಕತ್ವವನ್ನು ಬಯಸುತ್ತಿದೆ. ವಿಶ್ವದ ಯಾವುದೇ ಸಮಸ್ಯೆಗಾದರೂ ಅಮೆರಿಕ ಸ್ಪಂದಿಸಿದೆ. ಎಲ್ಲಾ ಸಮಸ್ಯೆಗಳ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ. ವಿಶ್ವದ ನಾಯಕನಾಗಿ ಅಮೆರಿಕ ಮುಂದುವರಿಯುತ್ತಿದೆ ಎಂದರು.