×
Ad

ಜಗತ್ತು ಎಬೋಲ ಮುಕ್ತ ಘೋಷಣೆಗೆ ಕ್ಷಣಗಣನೆ

Update: 2016-01-13 23:39 IST

ಮಾನ್ರೋವಿಯ (ಲೈಬೀರಿಯ), ಜ. 13: ಪಶ್ಚಿಮ ಆಫ್ರಿಕದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿ ಎರಡು ವರ್ಷಗಳ ಕಾಲ ಅಲ್ಲಿನ ಜನರ ಬದುಕನ್ನು ನರಕ ಮಾಡಿದ್ದ ಸಾಂಕ್ರಾಮಿಕ ರೋಗ ಎಬೋಲ ಈಗ ಮರೆಯಾಗಿದೆ ಎಂಬ ಘೋಷಣೆಯನ್ನು ಶುಕ್ರವಾರ ಮಾಡುವ ನಿರೀಕ್ಷೆಯಿದೆ. ಇದಕ್ಕಾಗಿ ಲೈಬೀರಿಯವನ್ನು ರೋಗಮುಕ್ತ ಎಂಬುದಾಗಿ ಘೋಷಿಸಲು ಕಾಯಲಾಗುತ್ತಿದೆ.
ಈ ಮಾರಕ ಸಾಂಕ್ರಾಮಿಕ ರೋಗ 11,000ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿತ್ತು.
 2013ರ ಡಿಸೆಂಬರ್‌ನಲ್ಲಿ ದಕ್ಷಿಣ ಗಿನಿಯಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗ ಹಲವು ದೇಶಗಳ ಆರೋಗ್ಯ ವ್ಯವಸ್ಥೆಯನ್ನು ನಾಶಗೊಳಿಸಿತು ಹಾಗೂ ಆರ್ಥಿಕತೆಯನ್ನು ಪುಡಿಗಟ್ಟಿತು.
ಸೋಂಕಿನ ಪ್ರಭಾವ ಉತ್ತುಂಗದಲ್ಲಿದ್ದ ಅವಧಿಯಲ್ಲಿ ಗಿನಿ, ಲೈಬೀರಿಯ ಮತ್ತು ಸಿಯರಾ ಲಿಯೋನ್‌ಗಳ ರಾಜಧಾನಿ ನಗರಗಳಲ್ಲಿ ರಸ್ತ್ತೆಗಳಲ್ಲಿ ಶವಗಳು ರಾಶಿ ಬಿದ್ದಿದ್ದವು. ಆಸ್ಪತ್ರೆಗಳು ಕಿಕ್ಕಿರಿದು ತುಂಬಿದ್ದು ವಾರವೊಂದರಲ್ಲಿ ನೂರಾರು ಹೊಸ ರೋಗಿಗಳು ದಾಖಲಾಗುತ್ತಿದ್ದರು.
‘‘ಲೈಬೀರಿಯವನ್ನು ರೋಗಮುಕ್ತ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಘೋಷಿಸುತ್ತದೆ ಎಂಬ ಆಶಾವಾದವನ್ನು ನಾವು ಹೊಂದಿದ್ದೇವೆ’’ ಎಂದು ಲೈಬೀರಿಯದ ಮುಖ್ಯ ವೈದ್ಯಕೀಯ ಅಧಿಕಾರಿ ಫ್ರಾನ್ಸಿಸ್ ಕಾರ್ಟೆಹ್ ಹೇಳಿದರು.
‘‘ನಾವು ಮುಂದೆಯೂ ಈ ರೋಗದ ಬಗ್ಗೆ ಜಾಗರೂಕತೆಯಿಂದ ಇರುತ್ತೇವೆ ಹಾಗೂ ರೋಗ ಮರುಕಳಿಸದಿರುವುದನ್ನು ಖಾತರಿಪಡಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಸೂಚನೆಗಳನ್ನು ನೀಡುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News