ನಿತೀಶ್ ಸರಕಾರದಿಂದ ಸಮೋಸಾ-ಕಚೌರಿಗೆ ಶೇ.13.5 ತೆರಿಗೆ
ಪಾಟ್ನಾ, ಜ.13: ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚುವರಿ ಆದಾಯ ಕ್ರೋಡೀಕರಿಸಲು ಕಿ.ಗ್ರಾಂ.ಗೆ ರೂ. 500ಕ್ಕಿಂತ ಹೆಚ್ಚಿರುವ ಸಿಹಿತಿಂಡಿಗಳು, ಸೊಳ್ಳೆ ನಿವಾರಕಗಳು ಸೇರಿದಂತೆ ಕೆಲವು ಐಶಾರಾಮಿ ವಸ್ತುಗಳ ಮೇಲೆ ಶೇ.13.5ರಷ್ಟು ತೆರಿಗೆ ಹೇರಲು ಬಿಹಾರದ ನಿತೀಶ್ ಕುಮಾರ್ ಸಂಪುಟವು ಮಂಗಳವಾರ ನಿರ್ಧರಿಸಿದೆ.
ನಿತೀಶ್‌ರ ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟದ ಸಭೆಯೊಂದರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಾಹನಗಳ ಬಿಡಿ ಭಾಗಗಳು, ಬ್ಯಾಟರಿಯ ಭಾಗಗಳು, ಮರಳು, ಪರಿಮಳ ದ್ರವ್ಯಗಳು, ಸೆಂಟ್, ಹೇರ್ ಆಯಿಲ್‌ಗಳಿಗೂ ಶೇ. 13.5 ತೆರಿಗೆ ವಿಧಿಸಲಾಗುವುದೆಂದು ಅವರು ದನಿಗೂಡಿಸಿದರು.
ವಿವಿಧ ಇಲಾಖೆಗಳ 23 ಪ್ರಸ್ತಾವಗಳಿಗೆ ಬಿಹಾರದ ಸಂಪುಟ ಅನುಮೋದನೆಯ ಮುದ್ರೆಯೊತ್ತಿದೆ.
ಪ್ರಬಲ ಸಾಮಾಜಿಕ ಸಂದೇಶ ನೀಡುವ ‘ಚಾಕ್ ಆ್ಯಂಡ್ ಡಸ್ಟರ್’ ಚಲನ ಚಿತ್ರಕ್ಕೆ ಮನೋರಂಜನೆ ತೆರಿಗೆ ಮನ್ನಾ ಮಾಡಲು ಸಂಪುಟ ನಿರ್ಧರಿಸಿದೆ.
ವೈದ್ಯರು, ವೈದ್ಯಕೀಯ ಕಾಲೇಜುಗಳು ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳ ಪ್ರಾಧ್ಯಾಪಕರ ಖಾಸಗಿ ವೃತ್ತಿಯನ್ನು ನಿಷೇಧಿಸಲು ಅವರಿಗೆ ಅ-ವೃತ್ತಿಪರ ಭತ್ತೆ ನೀಡುವುದನ್ನು ಭವಿಷ್ಯದಲ್ಲಿ ಪರಿಗಣಿಸುವ ನಿರ್ಧಾರವನ್ನು ನಿತೀಶ್ ಸಂಪುಟ ಕೈಗೊಂಡಿದೆ.