×
Ad

ಕೋಲ್ಕತಾ :ಮಾಜಿ ಶಾಸಕ ಪುತ್ರನ ಕಾರು ಹರಿದು ಐಎಎಫ್ ಅಧಿಕಾರಿ ಬಲಿ

Update: 2016-01-13 23:59 IST

ಕೋಲ್ಕತಾ, ಜ.13: ಕೋಲ್ಕತಾದಲ್ಲಿ ಮಾಜಿ ಶಾಸಕರೊಬ್ಬರ 26ರ ಹರೆಯದ ಪುತ್ರ ಬುಧವಾರ ಮುಂಜಾನೆ ಭಾರತೀಯ ವಾಯು ದಳದ(ಐಎಎಫ್) ಕಾರ್ಪೊರಲ್ ಅಧಿಕಾರಿಯೊಬ್ಬರ ಮೇಲೆ ಕಾರು ಹರಿಸಿ ಕೊಂದಿದ್ದಾನೆ. ಕಾರ್ಪೊರಲ್ ಅಭಿಮನ್ಯು ಗೌಡ್ (21), ಈ ವರ್ಷ ಕೋಲ್ಕತಾದಲ್ಲಿ ಪ್ರಜಾಪ್ರಭುತ್ವ ದಿನದಂದು ನಡೆಯಲಿರುವ ಪೆರೇಡ್‌ನಲ್ಲಿ ಭಾಗವಹಿಸಲಿರುವ ಐಎಎಫ್ ತಂಡಕ್ಕೆ ಕವಾಯತು ತರಬೇತುದಾರರಾಗಿದ್ದರು.

ಅವರು ಬುಧವಾರ ಮುಂಜಾನೆ 6:30ರ ಸುಮಾರಿಗೆ ತಾಲೀಮೊಂದರಲ್ಲಿ ಭಾಗವಹಿಸಿದ್ದರು. ಆಗ, ಕೋಲ್ಕತಾ ಪೊಲೀಸರು ರೆಡ್‌ರೋಡ್‌ನ ಸುತ್ತ ಇರಿಸಿದ್ದ ಭದ್ರತಾ ಬೇಲಿಯನ್ನು ಮುರಿದು ಒಳನುಗ್ಗಿದ ಆಡಿ ಕ್ಯೂ7 ಎಸ್‌ಯುಎ ಕಾರೊಂದು ಅವರನ್ನು ನೆಲಕ್ಕೆ ಕೆಡವಿತು. ಕೂಡಲೇ ಗೌಡ್‌ರನ್ನು ಪೂರ್ವ ಕಮಾಂಡ್ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅವರಾಗಲೇ ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದರು.
ಸುಮಾರು ರೂ. 76 ಲಕ್ಷ ಬೆಲೆಯ ಎಸ್‌ಯುಪಿಯನ್ನು ಇತ್ತೀಚೆಗೆ ಮುಸ್ಯಾದಿ ಬಿಸಿನೆಸ್ ಪ್ರೈಲಿ., 16 ಬರ್ಮನ್ ಸ್ಟ್ರೀಟ್, ಉತ್ತರ ಕೋಲ್ಕತಾದ ಹೆಸರಿನಲ್ಲಿ ಖರೀದಿಸಲಾಗಿತ್ತು. ವಾಹನವನ್ನು ಕೋಲ್ಕತಾದ ಹಣ್ಣು ವ್ಯಾಪಾರಿಗಳ ಸಂಘದ ಅಧ್ಯಕ್ಷ ಮುಹಮ್ಮದ್ ಸೊಹ್ರಾಬ್‌ರ ಮಗ ಅಂಬಿಯಾ ಸೊಹ್ರಾಬ್ ಎಂಬವರು ಚಲಾಯಿಸುತ್ತಿದ್ದರೆಂದು ಶಂಕಿಸಲಾಗಿದೆ. ಮುಹಮ್ಮದ್ 2011ರ ವರೆಗೆ ಆರ್‌ಜೆಡಿ ಶಾಸಕರಾಗಿದ್ದರು.
ಈ ಘಟನೆಯು ಭದ್ರತಾ ಸಂಸ್ಥೆಗಳಿಗೆ ಆಘಾತವನ್ನುಂಟು ಮಾಡಿದ್ದು, ಇದೊಂದು ಭಾರೀ ಭದ್ರತಾ ಉಲ್ಲಂಘನೆಯೆಂದೇ ಪರಿಗಣಿಸಿವೆ.
ಕೋಲ್ಕತಾದ ಪೊಲೀಸ್ ಆಯುಕ್ತ ಸುರೋಜಿತ್ ಕೌರ್ ಪುರಕಾಯಸ್ಥ ಹಾನಿಯ ಪರಿಶೀಲನೆಗಾಗಿ ಸ್ಥಳಕ್ಕೆ ತಲುಪಿದ್ದಾರೆ.
ವಾಹನದಲ್ಲಿ ಕೇವಲ ಒಬ್ಬನೇ ವ್ಯಕ್ತಿ ಇದ್ದನೆಂದು ತೋರುತ್ತದೆ. ಆತ ಪರಾರಿಯಾಗಲು ಯಶಸ್ವಿಯಾಗಿದ್ದಾನೆ. ಆದರೆ, ತಾವಾತನನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಿದ್ದೇವೆ. ವಾಹನವು ರೆಡ್‌ರೋಡ್‌ನ ಭದ್ರತಾ ವ್ಯವಸ್ಥೆಯನ್ನು ಹೇಗೆ ಮುರಿಯಿತೆಂಬ ಕುರಿತಾಗಿಯೂ ತಾವು ತನಿಖೆ ನಡೆಸಲಿದ್ದೇವೆಂದು ಪುರಕಾಯಸ್ಥ ಹೇಳಿದ್ದಾರೆ. ಕಾರ್ಪೊರಲ್ ಗೌಡ್, ಗುಜರಾತ್‌ನ ಸೂರತ್‌ನವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News