ಮಸೂದ್ ಅಝರ್ ಬಂಧನ ಗೊತ್ತಿಲ್ಲ ; ವಿದೇಶಾಂಗ ಕಾರ್ಯದರ್ಶಿಗಳ ಸಭೆ ಮುಂದೂಡಿಕೆ : ಪಾಕ್ ವಿದೇಶಾಂಗ ಕಚೇರಿ
ಹೊಸದಿಲ್ಲಿ, ಜ.14: ಜೈಷ್ -ಎ-ಮುಹಮ್ಮದ್ ಉಗ್ರ ಸಂಘಟನೆಯ ನಾಯಕ ಮೌಲಾನ ಮಸೂದ್ ಅಝರ್‌ನ್ನು ಪಾಕಿಸ್ತಾನ ಬಂಧಿಸಿರುವ ವಿಚಾರ ಗೊತ್ತಿಲ್ಲ. ಅಂತಹ ಬಂಧನದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಖಲೀಲುಲ್ಲಾ ಖಾಝಿ ಹೇಳಿದ್ದಾರೆ.
ಶುಕ್ರವಾರ ನಿಗದಿಯಾಗಿರುವ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಸಭೆ ಮುಂದೂಡಲಾಗಿದೆ. ದಿನಾಂಕವನ್ನು ಮುಂದೆ ನಿಗದಿಪಡಿಸಲಾಗುವುದು ಎಂದು ಖಲೀಲುಲ್ಲಾ ಮಾಹಿತಿ ನೀಡಿದ್ದಾರೆ.
ಪಠಾಣ್‌ಕೋಟ್ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನವು ಜೈಷ್ ಮುಖ್ಯಸ್ಥ ಅಝರ್ ಮುಹಮ್ಮದ್ ಮತ್ತಿತರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಪಾಕ್ ಸರಕಾರ ಬುಧವಾರ ಹೇಳಿತ್ತು. ಆದರೆ ವಿದೇಶಾಂಗ ಸಚಿವಾಲಯದ ವಕ್ತಾರ ಖಲೀಲುಲ್ಲಾ ಖಾಝಿ ಹೇಳಿಕೆಯಿಂದಾಗಿ ಗೊಂದಲ ಉಂಟಾಗಿದೆ.
ಆಡಿಯೋ ಬಿಡುಗಡೆ: ಇದೇ ವೇಳೆ ಅಝರ್‌ನನ್ನು ಬಂಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಜೈಷ್ ಸಂಘಟನೆಯ ಉಗ್ರರು ಇಂದು ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.