ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಮುಂದೂಡಿಕೆ
ಇಸ್ಲಾಮಾಬಾದ್,ಜ.14: ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ನಿಗದಿಯಾಗಿರುವಂತೆ ಶುಕ್ರವಾರ ನಡೆಯುವುದಿಲ್ಲ ಎಂದು ಪಾಕಿಸ್ತಾನವು ಗುರುವಾರ ತಿಳಿಸಿದೆ. ಪಠಾಣ್‌ಕೋಟ್ ವಾಯುನೆಲೆಯ ಮೇಲಿನ ಭಯೋತ್ಪಾದಕ ದಾಳಿಯು ಸೃಷ್ಟಿಸಿರುವ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಜೈಷ್-ಎ-ಮೊಹಮ್ಮದ್‌ನ ಮುಖ್ಯಸ್ಥ ವೌಲಾನಾ ಮಸೂದ್ ಅಝರ್‌ನ ಬಂಧನವನ್ನೂ ಪಾಕಿಸ್ತಾನವು ದೃಢಪಪಡಿಸಿಲ್ಲ.
ಇಲ್ಲಿ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದ ವಿದೇಶಾಂಗ ಕಚೇರಿಯ ವಕ್ತಾರ ಖಾಜಿ ಖಲೀಲುಲ್ಲಾ ಅವರು, ಮಾತುಕತೆಯ ದಿನಾಂಕವನ್ನು ಮರುನಿಗದಿಗೊಳಿಸಲು ಉಭಯ ರಾಷ್ಟ್ರಗಳು ಪರಸ್ಪರ ಸಂಪರ್ಕದಲ್ಲಿದ್ದು, ಸಮಾಲೋಚನೆಗಳನ್ನು ನಡೆಸುತ್ತಿವೆ ಎಂದರು.
ಅಝರ್ ಬಂಧನ ಕುರಿತ ಪ್ರಶ್ನೆಗೆ, ಇಂತಹ ಬಂಧನದ ಬಗ್ಗೆ ತನಗೆ ತಿಳಿದಿಲ್ಲ. ಬುಧವಾರ ಪ್ರಧಾನಿ ಕಚೇರಿ(ಪಿಎಂಒ)ಯು ಹೊರಡಿಸಿರುವ ಹೇಳಿಕೆಯ ಹೊರತು ಬೇರೆ ಯಾವುದೇ ಮಾಹಿತಿ ತನ್ನ ಬಳಿಯಿಲ್ಲ ಎಂದು ಉತ್ತರಿಸಿದರು.
ಪ್ರಧಾನಿ ನವಾಝ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಉನ್ನತ ಮಟ್ಟದ ಸಭೆಯ ಬಳಿಕ ಪಿಎಂಒ ಹೇಳಿಕೆಯೊಂದರಲ್ಲಿ, ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಜೈಷ್‌ಗೆ ಸೇರಿದ ಹಲವರನ್ನು ಬಂಧಿಸಲಾಗಿದೆ ಮತ್ತು ಅದರ ಕೆಲವು ಕಚೇರಿಗಳನ್ನು ಗುರುತಿಸಿ ಬೀಗಮುದ್ರೆ ಹಾಕಲಾಗಿದೆ ಎಂದು ತಿಳಿಸಿತ್ತು.
ಪಠಾಣ್‌ಕೋಟ್ ದಾಳಿಯ ರೂವಾರಿ ಎಂದು ನಂಬಲಾಗಿರುವ ಅಝರ್ ಬಂಧನ ಕುರಿತ ಮಾಧ್ಯಮ ವರದಿಗಳನ್ನು ಪಾಕಿಸ್ತಾನವು ದೃಢಪಡಿಸಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ಬುಧವಾರ ರಾತ್ರಿ ಹೇಳಿದ್ದರು.
ಭಾರತವು ಬುಧವಾರ ಮಾತುಕತೆಗಳ ಕುರಿತಂತೆ ತನ್ನ ನಿರ್ಧಾರವನ್ನು ಮುಂದೂಡಿದ್ದು,ಅಝರ್ ಬಂಧನದ ದೃಢೀಕರಣವಾಗದ್ದು ಇದಕ್ಕೆ ಕಾರಣವೆನ್ನಲಾಗಿದೆ.
ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳ ಮುನ್ನ ಉಭಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಪರಸ್ಪರ ಭೇಟಿಯಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.