ಪಶ್ಚಿಮ ಆಫ್ರಿಕ ಎಬೋಲ ಮುಕ್ತ: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ
ಜಿನೇವ, ಜ. 14: ಪಶ್ಚಿಮ ಆಫ್ರಿಕವನ್ನು ಎರಡು ವರ್ಷಗಳ ಕಾಲ ಬಾಧಿಸಿರುವ ಭೀಕರ ಸಾಂಕ್ರಾಮಿಕ ರೋಗ ಎಬೋಲ ಕೊನೆಗೂ ಮರೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಘೋಷಿಸಿದೆ. ಹೆಚ್ಚು ಬಾಧೆಗೊಳಗಾದ ಲೈಬೀರಿಯ ರೋಗಮುಕ್ತವಾಗಿದೆ ಎಂಬ ಪ್ರಮಾಣಪತ್ರದ ಬಳಿಕ ಈ ಘೋಷಣೆ ಹೊರಬಿದ್ದಿದೆ.
‘‘ಲೈಬೀರಿಯದಲ್ಲಿ ತೀರಾ ಇತ್ತೀಚೆಗೆ ಕಾಣಿಸಿಕೊಂಡ ಎಬೋಲ ಸೋಂಕು ಕೊನೆಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇಂದು ಘೋಷಿಸುತ್ತದೆ ಹಾಗೂ ಪಶ್ಚಿಮ ಆಫ್ರಿಕದಲ್ಲಿನ ಎಲ್ಲ ಗೊತ್ತಿರುವ ಸೋಂಕು ಪ್ರಸಾರ ಮಾಧ್ಯಮಗಳಿಗೆ ತಡೆಹಾಕಲಾಗಿದೆ ಎಂದು ಅದು ಹೇಳುತ್ತದೆ’’ ಎಂದು ಅದು ಹೇಳಿದೆ.
ಆದಾಗ್ಯೂ, ‘‘ಕೆಲಸ ಮುಗಿದಿಲ್ಲ’’ ಎಂದು ಹೇಳಿರುವ ಜಾಗತಿಕ ಆರೋಗ್ಯ ಸಂಸ್ಥೆ, ‘‘ಸೋಂಕು ಮತ್ತೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ’’ ಎಂದು ಎಚ್ಚರಿಸಿದೆ.
‘‘ನಾವು ನಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕಾದ ಅಗತ್ಯವಿದೆ’’ ಎಂದು ಎಬೋಲ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಪೀಟರ್ ಗ್ರಾಫ್ ಹೇಳುತ್ತಾರೆ.
ದಕ್ಷಿಣ ಗಿನಿಯಲ್ಲಿ 2013ರ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡ ಭಯಾನಕ ಕಾಯಿಲೆ ಪಶ್ಚಿಮ ಆಫ್ರಿಕದಾದ್ಯಂತ 11,000ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ.
ಸೋಂಕು ಹರಡುವಿಕೆ ಪ್ರಮಾಣ ತಾರಕಕ್ಕೇರಿದ ದಿನಗಳಲ್ಲಿ, ರೋಗವು ಗಿನಿ, ಲೈಬೀರಿಯ ಮತ್ತು ಸಿಯರಾ ಲಿಯೋನ್‌ಗಳ ಜನಜೀವನವನ್ನೇ ಅಲುಗಾಡಿಸಿತು ಹಾಗೂ ಆ ದೇಶಗಳ ದುರ್ಬಲ ಆರ್ಥಿಕತೆ ಮತ್ತು ಕ್ಷೀಣ ಆರೋಗ್ಯ ವ್ಯವಸ್ಥೆಯನ್ನು ಚಿಂದಿ ಉಡಾಯಿಸಿತು.
ಲೈಬೀರಿಯದಲ್ಲಿ ಕೊನೆಯ ಶಂಕಿತ ಎಬೋಲ ಪ್ರಕರಣಗಳು ಪರೀಕ್ಷೆಯಲ್ಲಿ ದೃಢ ಪಡದ ಬಳಿಕದ ಎರಡು ಜೋಪಾಸನಾ (ಇನ್‌ಕ್ಯುಬೇಶನ್) ಅವಧಿಗಳಿಗೆ ಸಮನಾದ 42 ದಿನಗಳ ಬಳಿಕ ಈ ಘೋಷಣೆಯನ್ನು ಮಾಡಲಾಗಿದೆ.