×
Ad

ಟರ್ಕಿಯಲ್ಲಿ ಬಾಂಬ್ ಸ್ಫೋಟ: 5 ಸಾವು, 39 ಗಾಯ

Update: 2016-01-14 23:42 IST

ಇಸ್ತಾಂಬುಲ್ (ಟರ್ಕಿ), ಜ. 14: ಆಗ್ನೇಯ ಟರ್ಕಿಯಲ್ಲಿ ಒಂದು ಪೊಲೀಸ್ ಠಾಣೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪೊಲೀಸ್ ಅಧಿಕಾರಿಗಳ ವಸತಿ ಕಟ್ಟಡದ ಮೇಲೆ ಕುರ್ದಿಶ್ ಭಯೋತ್ಪಾದಕರು ಗುರುವಾರ ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದಾರೆ ಹಾಗೂ 39 ಮಂದಿ ಗಾಯ
ಗೊಂಡಿದ್ದಾರೆ.
ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಸಿನಾರ್ ಪಟ್ಟಣದಲ್ಲಿ ನಡೆಸಿದ ಆರಂಭಿಕ ಕಾರ್ ಬಾಂಬ್ ಸ್ಫೋಟದಲ್ಲಿ ಇಬ್ಬರು ಮೃತಪಟ್ಟರು ಹಾಗೂ ಬಳಿಕ ಕಟ್ಟಡವೊಂದು ಕುಸಿದಾಗ ಇನ್ನೂ ಮೂವರು ಪ್ರಾಣ ಕಳೆದುಕೊಂಡರು ಎಂದು ದಿಯಾರ್‌ಬಾಕಿರ್ ರಾಜ್ಯದ ರಾಜ್ಯಪಾಲರ ಕಚೇರಿ ಹೊರಡಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತಡರಾತ್ರಿ ನಡೆದ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ವಾಸಿಸುತ್ತಿರುವ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ ಇಡೀ ಹೊರಗಿನ ಗೋಡೆ ಹಾರಿ ಹೋಗಿದೆ.
ಗಾಯಗೊಂಡವರಲ್ಲಿ ಪೊಲೀಸರೂ ಇದ್ದಾರೆ, ನಾಗರಿಕರೂ ಇದ್ದಾರೆ. ಆದರೆ, ಮೃತಪಟ್ಟವರೆಲ್ಲರೂ ನಾಗರಿಕರು ಎಂದು ಆರಂಭಿಕ ವರದಿಗಳು ಹೇಳಿವೆ.
ಮೊದಲು ನಡೆದ ಬಾಂಬ್ ಸ್ಫೋಟದಲ್ಲಿ 14 ಮಂದಿ ಗಾಯಗೊಂಡರು ಹಾಗೂ ಬಳಿಕ ನಡೆದ ಕಟ್ಟಡ ಕುಸಿತದಲ್ಲಿ 25 ಮಂದಿ ಗಾಯಗೊಂಡರು ಎಂದು ರಾಜ್ಯಪಾಲರ ಕಚೇರಿಯ ಹೇಳಿಕೆ ತಿಳಿಸಿದೆ.
ಭಯೋತ್ಪಾದಕರು ಕಾರ್ ಬಾಂಬ್ ಸ್ಫೋಟ ನಡೆಸಿದ ಬೆನ್ನಿಗೇ ರಾಕೆಟ್ ದಾಳಿ ನಡೆಸಿದರು ಹಾಗೂ ಗುಂಡಿನ ದಾಳಿ ನಡೆಸಿದರು ಎಂದು ವರದಿಗಳು ಹೇಳಿವೆ.
ಪಿಕೆಕೆ ಟರ್ಕಿ ದೇಶದ ವಿರುದ್ಧ 1984ರಲ್ಲೇ ಬಂಡಾಯ ಘೋಷಿಸಿದೆ. ಕುರ್ದ್‌ಗಳಿಗೆ ಸ್ವಾತಂತ್ರ ಬೇಕು ಎನ್ನುವುದು ಅದರ ಆರಂಭಿಕ ಬೇಡಿಕೆಯಾಗಿದ್ದರೂ, ದೇಶದ ಅತಿ ದೊಡ್ಡ ಜನಾಂಗೀಯ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸ್ವಾಯತ್ತೆ ಮತ್ತು ಹಕ್ಕುಗಳನ್ನು ನೀಡಬೇಕೆನ್ನುವುದು ಅದರ ಈಗಿನ ಬೇಡಿಕೆಯಾಗಿದೆ.
ಅದು ನಡೆಸಿದ ಹಿಂಸಾಚಾರದಲ್ಲಿ ಈವರೆಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News