×
Ad

ಶೀಘ್ರವೇ ದಿಲ್ಲಿ, ಉ.ಪ್ರ. ಬಸ್‌ಗಳಲ್ಲಿ ಎಥೆನಾಲ್ ಕಡ್ಡಾಯ

Update: 2016-01-14 23:46 IST

ಹೊಸದಿಲ್ಲಿ, ಜ.14: ಎಥೆನಾಲ್ ಮಿಶ್ರಿತ ಪೆಟ್ರೋಲ್‌ನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರವು ಹೊಸ ನೀತಿಯೊಂದನ್ನು ರೂಪಿಸಲಿದೆಯೆಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ತಿಳಿಸಿದ್ದಾರೆ.
 ಹೊಸದಿಲ್ಲಿಯಲ್ಲಿ ನಡೆದ ಧಾರಣಾಶೀಲತೆ ಕುರಿತ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.
  ಪೆಟ್ರೋಲ್ ಜೊತೆ ಎಥೆನಾಲ್‌ನ ಮಿಶ್ರಣವನ್ನು ಕಡ್ಡಾಯ ಮಿತಿಯನ್ನು ಶೇ.10ಕ್ಕೆ ಹೆಚ್ಚಿಸಲು ಸರಕಾರ ಬಯಸುತ್ತಿದೆ. ಪ್ರಸ್ತುತ ಎಥೆನಾಲ್ ಮಿಶ್ರಣದ ಮಿತಿಯನ್ನು ಶೇ.5ಕ್ಕೆ ನಿಗದಿಪಡಿಸಲಾಗಿದೆ. ಆದರೆ ಎಥೆನಾಲ್‌ನ ಲಭ್ಯತೆ ಹಾಗೂ ದರನಿಗದಿಗೆ ಸಂಬಂಧಿಸಿದ ಸಮಸ್ಯೆಗಳು, ಈ ಗುರಿಯನ್ನು ಸಾಧಿಸಲು ಅಡ್ಡಗಾಲು ಹಾಕುತ್ತಿವೆಯೆಂದರು.
 
ಈ ವಿಷಯದ ಬಗ್ಗೆ ತಾನು ಈಗಾಗಲೇ ಪ್ರಧಾನಿ ಜೊತೆ ಚರ್ಚಿಸಿದ್ದೇನೆ. ಎಥೆನಾಲ್ ಉತ್ಪಾದನೆಯ ಸಂದರ್ಭದಲ್ಲಿ ಸೃಷ್ಟಿಯಾಗುವ ಭಾರೀ ಪ್ರಮಾಣದ ಜೈವಿಕ ತ್ಯಾಜ್ಯಗಳು, ಇದಕ್ಕೂ ಮಿಗಿಲಾಗಿ ಈ ಇಂಧನದ ಮುಖ್ಯ ಮೂಲವಾದ ಸಕ್ಕರೆಯ ಲಭ್ಯತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ನೂತನ ನೀತಿಯು ಸ್ಪಂದಿಸಲಿದೆಯೆಂದು ಹೇಳಿದರು. ಎಥೆನಾಲ್ ಮಿಶ್ರಿತ ತೈಲದ ಬಳಕೆಯ ಮಹತ್ವವನ್ನು ಒತ್ತಿ ಹೇಳಿದ ಗಡ್ಕರಿ, ‘‘ದೇಶದಲ್ಲಿ ಸುಮಾರು 1 ಲಕ್ಷ ಬಸ್‌ಗಳು ಪರ್ಯಾಯ ಇಂಧನದ ಮೂಲಕ ಓಡುತ್ತಿವೆ. ದಿಲ್ಲಿ, ಉತ್ತರಪ್ರದೇಶ ಹಾಗೂ ಬಿಹಾರಗಳಲ್ಲಿ, ಎಥೆನಾಲ್ ಬಳಸಿ ಅಪಾರ ಸಂಖ್ಯೆಯ ಬಸ್‌ಗಳನ್ನು ಓಡಿಸಲು ಸಾಧ್ಯವಿದೆಯೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News