ಜಕಾರ್ತದಲ್ಲಿ ಸರಣಿ ಸ್ಫೋಟ: 6 ಸಾವು
ನಾಲ್ವರು ಭಯೋತ್ಪಾದಕರ ಹತ್ಯೆ; ನಾಲ್ವರ ಬಂಧನ
ಜಕಾರ್ತ, ಜ. 14: ಇಂಡೋನೇಶ್ಯದ ರಾಜಧಾನಿ ಜಕಾರ್ತದ ಹೃದಯ ಭಾಗದಲ್ಲಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟಗಳು ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಅದೇ ವೇಳೆ, ನಾಲ್ವರು ಶಂಕಿತ ಆಕ್ರಮಣಕಾರರೂ ಸತ್ತಿದ್ದಾರೆ ಹಾಗೂ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ರಾಜಧಾನಿಯ ಜನಜಂಗುಳಿಯಿಂದ ಕೂಡಿದ ಸ್ಥಳವೊಂದರಲ್ಲಿ ಬೆಳಗ್ಗೆ 10 ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಮೂರು ಗ್ರೆನೇಡ್‌ಗಳು ಸ್ಫೋಟಗೊಂಡಾಗ ಮೂವರು ಪೊಲೀಸರು ಮತ್ತು ಮೂವರು ನಾಗರಿಕರು ಮೃತಪಟ್ಟರು. ಸ್ಟಾರ್‌ಬಕ್ಸ್ ಕಾಫಿ ಅಂಗಡಿಯ ಒಳಗೆ ಕನಿಷ್ಠ ಮೂವರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡರು ಎಂದು ಪೊಲೀಸರು ತಿಳಿಸಿದರು.
ಸ್ಫೋಟ ನಡೆದ ಸ್ಥಳ ಅಧ್ಯಕ್ಷೀಯ ಅರಮನೆ ಮತ್ತು ವಿಶ್ವಸಂಸ್ಥೆಯ ಕಚೇರಿ ಸಂಕೀರ್ಣಕ್ಕೆ ಹತ್ತಿರದಲ್ಲಿದೆ.
ಸುಮಾರು 15 ಭಯೋತ್ಪಾದಕರು ಬಂದೂಕುಗಳು ಮತ್ತು ಸ್ಫೋಟಕಗಳೊಂದಿಗೆ ಮೋಟರ್‌ಸೈಕಲ್‌ಗಳಲ್ಲಿ ನಗರವನ್ನು ಪ್ರವೇಶಿಸಿದ್ದಾರೆ ಎಂದು ನಂಬಲಾಗಿದೆ.
ಪೊಲೀಸರೊಂದಿಗೆ ನಡೆದ ಎರಡು ತಾಸುಗಳ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರು ಮೃತಪಟ್ಟರು. ಕೆಲವು ಭಯೋತ್ಪಾದಕರು ಚಿತ್ರ ಮಂದಿರವೊಂದರ ಆವರಣದಲ್ಲಿ ಅವಿತರು.
ಪಾಕಿಸ್ತಾನ ಮತ್ತು ಟರ್ಕಿ ರಾಯಭಾರ ಕಚೇರಿಗಳ ಹೊರಗೆ ಇನ್ನೂ ಮೂರು ಸ್ಫೋಟಗಳು ಸಂಭವಿಸಿದವು ಎಂದು ಇಂಡೋನೇಶ್ಯ ಟವಿ ವರದಿ ಮಾಡಿದೆ.
ಸ್ಫೋಟಗಳು ಸಂಭವಿಸಿದ ಬಳಿಕ ನೂರಾರು ಪೊಲೀಸರು ಮತ್ತು ಯುದ್ಧ ಟ್ಯಾಂಕ್‌ಗಳು ಸ್ಥಳಕ್ಕೆ ಧಾವಿಸಿದವು.
ಸ್ಟಾರ್‌ಬಕ್ಸ್ ಸಮೀಪ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಹಾಗೂ ಕಟ್ಟಡಗಳ ಸುತ್ತಲೂ ಹೊಗೆಯಾಡುತ್ತಿತ್ತು.
2009ರಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದ ಬಳಿಕ ಜಕಾರ್ತದಲ್ಲಿ ದೊಡ್ಡ ಸ್ಫೋಟವೊಂದು ನಡೆದಿರುವುದು ಇದೇ ಮೊದಲ ಬಾರಿಯಾಗಿದೆ. ಸರಕಾರಿ ಅಧಿಕಾರಿಗಳು, ವಿದೇಶೀಯರು ಮತ್ತು ಇತರರ ಮೇಲೆ ದಾಳಿ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿದ ಬಳಿಕ ಇಂಡೋನೇಶ್ಯದಲ್ಲಿ ಕಟ್ಟೆಚ್ಚರ ಘೋಷಿಸಲಾಗಿತ್ತು.
ಬಾಲಿಯಲ್ಲಿ ಸರ್ಪಗಾವಲು
ಜಕಾರ್ತದಲ್ಲಿ ನಡೆದ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ಇಂಡೋನೇಶ್ಯದ ದ್ವೀಪ ನಗರ ಬಾಲಿಯಲ್ಲಿ 9,000ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 2002ರಲ್ಲಿ ಇಂಡೋನೇಶ್ಯದ ಅತ್ಯಂತ ಭೀಕರ ಬಾಂಬ್‌ಸ್ಫೋಟ ನಡೆದಿತ್ತು. ಅದರಲ್ಲಿ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಸಂಗೀತ ಕಚೇರಿ ನಡೆಯಲಿದೆ!
ಜಕಾರ್ತದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆಯುವ ಮೊದಲು ಉಗ್ರಗಾಮಿ ಸಂಘಟನೆ ಐಸಿಸ್ ಸಾಂಕೇತಿಕ ಎಚ್ಚರಿಕೆ ಹೊರಡಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸರಣಿ ಬಾಂಬ್ ಸ್ಫೋಟಗಳನ್ನು ಯಾವ ಗುಂಪು ನಡೆಸಿತ್ತು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ಆ್ಯಂಟನ್ ಚಾರ್ಲಿಯನ್ ಹೇಳಿದರು.
‘‘ಇಂಡೋನೇಶ್ಯದಲ್ಲಿ ಒಂದು ಸಂಗೀತ ಕಚೇರಿ ನಡೆಯಲಿದೆ ಹಾಗೂ ಅದು ಜಾಗತಿಕ ಸುದ್ದಿಯಾಗುತ್ತದೆ ಎಂದು ಐಸಿಸ್ ಹೇಳಿತ್ತು’’ ಎಂದು ಅವರು ಸ್ಥಳೀಯ ಆಕಾಶವಾಣಿಗೆ ತಿಳಿಸಿದರು.