ಲೋಕಪಾಲ ಹುದ್ದೆಗೆ 16 ಅರ್ಜಿದಾರರಲ್ಲಿ ಮೂವರು ಸು.ಕೋ. ಮಾಜಿ ನ್ಯಾಯಾಧೀಶರು
ಹೊಸದಿಲ್ಲಿ, ಜ.14: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸೃಷ್ಟಿಸಲಾಗಿರುವ ಲೋಕಪಾಲ ಹುದ್ದೆಗೆ ಅರ್ಜಿ ಸಲ್ಲಿಸಿರುವವರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂವರು ನಿವೃತ್ತ ನ್ಯಾಯಾಧೀಶರು, ಓರ್ವ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ,ಯುಜಿಸಿಯ ಓರ್ವ ಸದಸ್ಯರು ಮತ್ತು ಮಾಜಿ ಮಾಹಿತಿ ಆಯುಕ್ತರೋರ್ವರು ಸೇರಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಸ್ ಅಗರವಾಲ್ ಅವರ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಆಯುಕ್ತ ಸುಧೀರ್ ಭಾರ್ಗವ ಅವರ ಆದೇಶದ ಬಳಿಕ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಸರ್ವೋಚ್ಚ ನ್ಯಾಯಾಲಯವು ಲೋಕಪಾಲ ಹುದ್ದೆಗಾಗಿ ತನ್ನ ನಿವೃತ್ತ ನಾಯಾಧೀಶರಾದ ನ್ಯಾ.ಜ್ಞಾನಸುಧಾ ಮಿಶ್ರಾ, ನ್ಯಾ.ಸಿ.ಕೆ.ಪ್ರಸಾದ್ ಮತ್ತು ನ್ಯಾ.ಬಲ್ಬೀರ್ ಸಿಂಗ್ ಚೌಹಾಣ್ ಅವರನ್ನು ನಾಮಕರಣಗೊಳಿಸಿದೆ.
ಜಾರ್ಖಂಡ್ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ಹಾಲಿ ವಿದ್ಯುಚ್ಛಕ್ತಿ ಮೇಲ್ಮನವಿ ನ್ಯಾಯಾಧಿಕರಣದ ಅಧ್ಯಕ್ಷ ಎಂ.ಕರ್ಪಗ ವಿನಾಯಕಂ,ಮಾಜಿ ಯುಜಿಸಿ ಸದಸ್ಯ ಎಂ.ಎಂ.ಅನ್ಸಾರಿ ಹಾಗೂ ಮಾಜಿ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು ಅವರೂ ಹುದ್ದೆಗೆ ನೇರವಾಗಿ ಅರ್ಜಿ ಸಲ್ಲಿಸಿದವರಲ್ಲಿ ಸೇರಿದ್ದಾರೆ.
ಶಿಕ್ಷಕ ಅರುಣ ಗಣೇಶ ಜೋಗದೇವ್,ಸಾಮಾಜಿಕ ಕಾರ್ಯಕರ್ತರಾದ ಚಂದ್ರಭೂಷಣ ಮಿಶ್ರಾ ಮತ್ತು ಚಪ್ಪಿಡಿ ವೆಂಕಟೇಶ್ವರ ನಾನಾ ರಾವ್,ಪತ್ರಕರ್ತ ಗುಲ್ಶನ್ ಕುಮಾರ್ ಬಾಜ್ವಾ,ವಕೀಲ ವಿನಯ ಭೂಷಣ ಭಾಟಿಯಾ, ಉಕ್ಕು ಕಂಪೆನಿಯ ಉದ್ಯೋಗಿ ಅಂಜನಿ ಕುಮಾರ,ನಿವೃತ್ತ ಐಎಎಸ್ ಅಧಿಕಾರಿ ರಾಮ್ ಸಜಿವಾನ್,ನಿವೃತ್ತ ಐಪಿಎಸ್ ಅಧಿಕಾರಿ ಕೆ.ನಂದಬಾಲನ್ ಮತ್ತಿತರರು ಈ ಪಟ್ಟಿಯಲ್ಲಿದ್ದಾರೆ.
ರಾಮ್ ಸಜಿವಾನ್ ಅವರ ಅರ್ಜಿಯು ಗಡುವು ಮುಗಿದ ನಂತರ ಸಲ್ಲಿಕೆಯಾಗಿದ್ದು, ಮಧ್ಯಪ್ರದೇಶ ಸರಕಾರವು ಅದನ್ನು ಕಳುಹಿಸಿತ್ತು. ಲೋಕಪಾಲ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಅರ್ಜಿದಾರರ ಹೆಸರುಗಳನ್ನು ಬಹಿರಂಗಗೊಳಿಸುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರ ವಿಶ್ವಾಸ ಹೆಚ್ಚುತ್ತದೆ ಎಂದು ಮಾಹಿತಿ ಆಯುಕ್ತರು ಡಿಒಪಿಟಿಗೆ ನೀಡಿದ್ದ ನಿರ್ದೇಶದಲ್ಲಿ ತಿಳಿಸಿದ್ದರು.
ಡಿಒಪಿಟಿ ಒಂದು ಅಧ್ಯಕ್ಷ ಹುದ್ದೆ(ಲೋಕಪಾಲ) ಮತ್ತು ತಲಾ ನಾಲ್ಕು ನ್ಯಾಯಾಂಗ ಮತ್ತು ನ್ಯಾಯಾಂಗೇತರ ಸದಸ್ಯರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ನ್ಯಾಯಾಂಗ ಸದಸ್ಯರ ಹುದ್ದೆಗಳಿಗೆ 23 ಜನರು ಅರ್ಜಿಗಳನ್ನು ಸಲ್ಲಿಸಿದ್ದರೆ, ನ್ಯಾಯಾಂಗೇತರ ಸದಸ್ಯರ ಹುದ್ದೆಗಳಿಗೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯ ಕಾರ್ಯದರ್ಶಿ ಗುಲಾಂ ನಬಿ ಲೋನೆ,ಮಾಜಿ ಸಿಐಸಿ ಸತ್ಯಾನಂದ ಮಿಶ್ರಾ, ಮಾಜಿ ದಿಲ್ಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಸೇರಿದಂತೆ 380 ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ.