ಚೀರಾಡುವುದನ್ನು ಇನ್ನಾದರೂ ಬಿಡಿ
ಮಾನ್ಯರೆ,
ಮೊನ್ನೆ ಮೈಸೂರಿನಲ್ಲಿ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಆಗಮಿಸಿದ್ದಾಗ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಶತಮಾನೋತ್ಸವ ಸಮಾರಂಭದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಷಣ ಮಾಡುವಾಗ ಸಭೆಯಲ್ಲಿದ್ದ ಬಿಜೆಪಿ ಮತ್ತು ಸಂಘ ಪರಿವಾರದ ಕಾಲಾಳುಗಳು ‘ಮೋದಿ ಮೋದಿ’ ಎಂದು ಚೀರಾಡುತ್ತಾ ಮುಖ್ಯಮಂತ್ರಿಗಳು ಮಾತನಾಡಿದ್ದು ಯಾರಿಗೂ ಕೇಳದಂತೆ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದರು. ಆದರೆ ಕೇಂದ್ರ ಸಚಿವ ಅನಂತ್ ಕುಮಾರ್ ಮಾತನಾಡುವಾಗ ಇಂತಹ ‘ಮೋದಿ ಮೋದಿ’ ಎಂಬ ಚೀರಾಟ ಇರಲಿಲ್ಲ, ಅಂದರೆ ಬೇಕೆಂದೇ ಸಿದ್ದರಾಮಯ್ಯನವರ ಭಾಷಣದ ಸಮಯದಲ್ಲಿ ಕೇಸರಿ ಪಡೆಗಳು ಗಲಾಟೆ ಮಾಡಿರುವುದು ಸ್ಪಷ್ಟ.ರಾಜ್ಯದ ಮುಖ್ಯ ಮಂತ್ರಿಗಳು ಮಾತನಾಡುವಾಗ ಹೇಗೆ ವರ್ತಿಸಬೇಕೆಂದು ಇವರಿಗೆ ಕನಿಷ್ಠ ಶಿಷ್ಟಾಚಾರವೂ ಗೊತ್ತಿಲ್ಲದಿರುವುದು ಖೇದಕರ.ಹಾಗಾದರೆ ಮುಂದಿನ ಸಾರಿ ಇಂತಹ ಸಭೆಗಳಿಗೆ ಮುಖ್ಯಮಂತ್ರಿಗಳ ಪಕ್ಷದವರೂ ತಮ್ಮ ಕಟ್ಟಾಳುಗಳನ್ನು ಕರೆದುಕೊಂಡು ಬಂದು ಕಿರುಚಾಡಲು ಹೇಳಿದರೆ ಅಲ್ಲಿ ಹೊಡೆದಾಟವಾಗಿ ಕಾನೂನು ಸಮಸ್ಯೆ ಹುಟ್ಟದೆ ಇರಲಾರದು.
ಮೊಟ್ಟ ಮೊದಲು ಸಂಘ ಪರಿವಾರದವರು ಗಮನಿಸಬೇಕಾದುದೇನೆಂದರೆ ‘ಮೋದಿ’ ಎಂಬ ಹೆಸರಿನ ಜಾದೂ ಈಗ ನಡೆಯುತ್ತಿಲ್ಲ. ಕಾರಣ ಮೋದಿ ಅಭಿವೃದ್ಧಿಯ ಬಗ್ಗೆ ಜನರಿಗೆ ಘೋರ ಭ್ರಮನಿರಸನವಾಗಿದೆ. ‘ಗುಜರಾತ್ ಮಾದರಿ ಅಭಿವೃದ್ದಿ’ ಎಂಬುದು ಶುದ್ಧ ಪ್ರಚಾರ ತಂತ್ರ ಎಂಬುದು ಜನರಿಗೆ ಮನದಟ್ಟಾಗಿದೆ. ಇದಕ್ಕೆ ಸಾಕ್ಷಿ ನಿನ್ನೆಯೇ ಹೊರಬಂದ ಮಹಾರಾಷ್ಟ್ರ ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು. ಕಾಂಗ್ರೆಸ್ ಹಾಗೂ ಎನ್‌ಸಿಪಿ ಅತ್ಯಂತ ಹೆಚ್ಚು ಸ್ಥಾನ ಪಡೆದಿದ್ದು ಬಿಜೆಪಿ-ಶಿವಸೇನಾ ಗುಂಪು ಸಂಪೂರ್ಣ ಮೂಲೆಗುಂಪಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರವೇ ಇರುವಾಗ ಈ ಅವಸ್ಥೆಯಾದರೆ ಇನ್ನು ಬೇರೆ ಪಕ್ಷದ ಸರಕಾರವಿದ್ದಿದ್ದರೆ ಬಿಜೆಪಿ-ಶಿವಸೇನೆ ಸಂಪೂರ್ಣ ವಾಶ್ ಔಟ್ ಆಗುತ್ತಿತ್ತು.ಹಾಗಾಗಿ ಸಂಘ ಪರಿವಾರದವರು ಹೋದಲ್ಲೆಲ್ಲಾ ‘ಮೋದಿ-ಮೋದಿ’ ಎಂದು ಚೀರಾಡುವುದನ್ನು ಇನ್ನಾದರೂ ಬಿಡಬೇಕು.