ಕಾಂಗ್ರೆಸ್ ವಿರುದ್ಧ ಬಾರಧ್ವಾಜ್ ಮತ್ತೊಂದು ಬಾಂಬ್
ನವದೆಹಲಿ: ಕೇಂದ್ರದ ಮಾಜಿ ಕಾನೂನು ಸಚಿವ ಹಾಗೂ ಕರ್ನಾಟಕದ ರಾಜ್ಯಪಾಲರಾಗಿದ್ದ ಎಚ್.ಆರ್.ಬಾರಧ್ವಾಜ್ ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯದಿದ್ದರೆ ನಿಮ್ಮ ತಲೆದಂಡ ತೆರಬೇಕಾದೀತು ಎಂದು ಸರ್ಕಾರದಿಂದ ನನ್ನ ಮೇಲೆ ಒತ್ತಡವಿತ್ತು ಎಂದು ಬಹಿರಂಗಪಡಿಸಿದ್ದಾರೆ.
2005ರಲಲಿ ಬಿಜೆಪಿ- ಜೆಡಿಯು ಸರ್ಕಾತ ಅಸ್ತಿತ್ವಕ್ಕೆ ಬರುವುದನ್ನು ತಡೆಯಲು ಯುಪಿಎ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದನ್ನು, ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ಒತ್ತಡ ಇತ್ತು ಎಂದು ಹೇಳಿದ್ದಾರೆ.
ಇದಕ್ಕಾಗಿ ತಾವು ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಬರ್‌ವಾಲ್ ಅವರನ್ನೂ ಭೇಟಿಯಾಗಿದ್ದೆ. ಆದರೆ ಉದ್ದೇಶ ಈಡೇರಲಿಲ್ಲ. ಐದು ಮಂದಿ ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ, 3-2 ಬಹುಮತದೊಂದಿಗೆ ಕೇಂದ್ರದ ನಿರ್ಧಾರವನ್ನು ದುರುದ್ದೇಶದಿಂದ ಕೂಡಿದ್ದು ಎಂದು ನಿರ್ಧರಿಸಿತು. ಸಂವಿಧಾನದ 356ನೇ ವಿಧಿಯನ್ನು ರಾಜಕೀಯ ದುರುದ್ದೇಶದಿಂದ ದುರುಪಯೋಗಪಡಿಸಿಕೊಳ್ಳಲು ಅಂದಿನ ರಾಜ್ಯಪಾಲ ಬೂಟಾಸಿಂಗ್ ನಿರ್ಧರಿಸಿದ್ದರು ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು.
ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಸಬರ್‌ವಾಲ್ ಅಣಕು ನ್ಯಾಯಾಲಯ ಸಭಾಗೃಹ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯ ಬಿಚ್ಚಿಟ್ಟ ಬಾರಧ್ವಾಜ್, "ನಾನು ಹಾಗೂ ಬಾರಧ್ವಾಜ್ ಕುಟುಂಬ ಸ್ನೇಹಿತರಾಗಿದ್ದರೂ, ಅತ್ಯಂತ ಕಠಿಣ ನ್ಯಾಯಾಧೀಶರಾಗಿದ್ದರು" ಎಂದು ಹೇಳಿದರು.