ದನದ ಮಾಂಸ ಶಂಕೆ ; ಮುಸ್ಲಿಮ್ ದಂಪತಿಗೆ ರೈಲಿನಲ್ಲಿ ಹಲ್ಲೆ
ಭೋಪಾಲ್, ಜ.15: ದನದ ಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಗೋರಕ್ಷಕ ಗುಂಪಿಗೆ ಸೇರಿದ ಹಿಂದು ರೈಟ್ ವಿಂಗ್ಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮುಹಮ್ಮದ್ ಹುಸೈನ್ ಮತ್ತು ನಸೀಮಾಬೀ ಎಂಬವರೇ ರೈಟ್ ವಿಂಗ್ಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಅಮಾಯಕ ದಂಪತಿಗಳು.
ಮುಹಮ್ಮದ್ ಹುಸೈನ್ ಮತ್ತು ನಸೀಮಾ ದಂಪತಿ ಕುಶಿನಗರ್ ಎಕ್ಸ್‌ಪ್ರೆಸ್‌ನಲ್ಲಿ ಬುಧವಾರ ಖಾಂಡ್ವಾದಿಂದ ಹಾರ್ಡಾಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ರೈಲು ಖಿರ್ಕಿಯಾ ರೈಲ್ವೇ ಸ್ಟೇಷನ್ ತಲುಪುತ್ತಿದ್ದಂತೆ ಗುಂಪೊಂದು ರೈಲಿಗೆ ನುಗ್ಗಿ ಹುಸೈನ್ ಮತ್ತು ನಸೀಮಾ ಅವರ ಹಲ್ಲೆ ನಡೆಸಿ, ದನದ ಮಾಂಸ ಎಲ್ಲಿಟ್ಟಿರುವುದಾಗಿ ಪ್ರಶ್ನಿಸಿದರೆನ್ನಲಾಗಿದೆ . ಇವರು ತಮ್ಮಲ್ಲಿ ದನದ ಮಾಂಸ ಇಲ್ಲ ಎಂದು ಹೇಳಿದರೂ ಬಿಡದೆ ರೈಟ್ ವಿಂಗ್ ತಂಡ ಅವರ ಬ್ಯಾಗ್‌ಗಳನ್ನು ರೈಲಿನಿಂದ ಹೊರಗೆ ಎಸೆದರೆನ್ನಲಾಗಿದೆ. ಬಳಿಕ ಅವರು ರೈಲಿನಲ್ಲಿ ಶೋಧ ನಡೆಸಿದಾಗ ಇನ್ನೊಬ್ಬರ ಚೀಲದಲ್ಲಿ ಮಾಂಸ ಪತ್ತೆಯಾಯಿತೆನ್ನಲಾಗಿದೆ. ಆದರೆ ಅದು ದನದ ಮಾಂಸ ಆಗಿರಲಿಲ್ಲ. ಕೋಣದ ಮಾಂಸವಾಗಿತ್ತು.
ಮಧ್ಯಪ್ರದೇಶದಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಗೋಹತ್ಯೆ ನಡೆಸಿದವೆ ಏಳು ವರ್ಷಗಳ ಸಜೆ ವಿಧಿಸಲಾಗುತ್ತದೆ. ಆದರೆ ಕೋಣಗಳನ್ನು ಕಡಿಯುವುದಕ್ಕೆ ಸಮಸ್ಯೆ ಇಲ್ಲ.