×
Ad

ತೈಲ ವ್ಯವಹಾರ ಪುನಾರಂಭಕ್ಕೆ ಇರಾನ್ ಸನ್ನದ್ಧ ಭಾರತವನ್ನು ಪ್ರಮುಖ ರಫ್ತು ಮಾರುಕಟ್ಟೆಯಾಗಿಸುವ ಗುರಿ

Update: 2016-01-15 20:43 IST

ಸಿಂಗಾಪುರ, ಜ. 15: ಐತಿಹಾಸಿಕ ಪರಮಾಣು ಒಪ್ಪಂದದ ಬಳಿಕ ಜಗತ್ತಿನೊಂದಿಗಿನ ಸಾಮಾನ್ಯ ತೈಲ ವ್ಯವಹಾರವನ್ನು ಪುನಾರಂಭಿಸಲು ಇರಾನ್ ಸನ್ನದ್ಧವಾಗಿದೆ. ಅದು ಲಕ್ಷಾಂತರ ಬ್ಯಾರಲ್ ಕಚ್ಚಾ ತೈಲವನ್ನು ಏಶ್ಯದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೃಹತ್ ತೈಲ ಮಾರುಕಟ್ಟೆ ಭಾರತ ಮತ್ತು ಯುರೋಪ್‌ನ ಹಳೆಯ ಭಾಗೀದಾರರಿಗೆ ಕಳುಹಿಸಿ ಕೊಡುವ ಸಿದ್ಧತೆಗಳಲ್ಲಿ ತೊಡಗಿದೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕಡಿತಗೊಳಿಸಿದೆ ಎಂಬುದನ್ನು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಶುಕ್ರವಾರ ಖಚಿತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಒಮ್ಮೆ ಈ ಆದೇಶ ಹೊರಬಿದ್ದರೆ ಇರಾನ್‌ನ ನೂರಾರು ಕೋಟಿ ಡಾಲರ್ ವೌಲ್ಯದ ಸೊತ್ತುಗಳು ಮತ್ತೆ ಸಕ್ರಿಯವಾಗುತ್ತವೆ ಹಾಗೂ ತೈಲ ರಫ್ತಿನ ಮೇಲಿನ ದಿಗ್ಬಂಧನೆ ತೆರವುಗೊಳ್ಳುತ್ತದೆ.
ದಿಗ್ಬಂಧನೆ ತೆರವುಗೊಂಡ ಬಳಿಕ ಇರಾನ್ ತನ್ನ ತೈಲ ರಫ್ತನ್ನು ದಿನಕ್ಕೆ 5 ಲಕ್ಷ ಬ್ಯಾರಲ್‌ನಷ್ಟು ಹಿಗ್ಗಿಸಲು ನಿರ್ಧರಿಸಿದೆ. ಬಳಿಕ ಮತ್ತೊಮ್ಮೆ ಹಂತ ಹಂತವಾಗಿ ಇಷ್ಟೇ ಗಾತ್ರದಷ್ಟು ತೈಲ ರಫ್ತನ್ನು ಹಿಗ್ಗಿಸಲಿದೆ. ಇದು ಈಗಾಗಲೇ ಮಾರುಕಟ್ಟೆಗೆ ಹರಿಯುತ್ತಿರುವ ತೈಲ ಪ್ರವಾಹದೊಂದಿಗೆ ಸೇರಿಕೊಂಡು ತೈಲ ಬೆಲೆಗಳ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿಸಲಿದೆ. 2014ರ ಬಳಿಕ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೇಲೆ ಈಗಾಗಲೇ 70 ಶೇಕಡದಷ್ಟು ಕುಸಿದು 30 ಡಾಲರ್ ಮಟ್ಟದಲ್ಲಿದೆ.
ಇರಾನ್ ತನ್ನ 22 ಅತಿ ದೊಡ್ಡ ಕಚ್ಚಾತೈಲ ವಾಹಕಗಳನ್ನು ನೀರಿಗಿಳಿಸುತ್ತಿದೆ. ಅವುಗಳ ಪೈಕಿ 13 ಸಂಪೂರ್ಣವಾಗಿ ಅಥವಾ ಬಹುತೇಕ ಸಂಪೂರ್ಣವಾಗಿ ತುಂಬಿದ್ದು ಭಾರತದ ಒಂದು ವಾರದ ಆಮದು ಅಗತ್ಯವನ್ನು ಪೂರೈಸಲಿದೆ.
ಜಗತ್ತಿನ ನಾಲ್ಕನೆ ಅತಿ ದೊಡ್ಡ ತೈಲ ನಿಕ್ಷೇಪವನ್ನು ಹೊಂದಿರುವ ಇರಾನ್, ಭಾರತವನ್ನು ತನ್ನ ಪ್ರಮುಖ ಕಚ್ಚಾ ತೈಲ ಆಮದು ರಾಷ್ಟ್ರವನ್ನಾಗಿ ಹೊಂದುವ ಗುರಿಯನ್ನು ಹೊಂದಿದೆ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘‘ಭಾರತದ ಕಚ್ಚಾ ತೈಲ ಅವಶ್ಯಕತೆ ಇತರ ಏಶ್ಯನ್ ದೇಶಗಳ ಅವಶ್ಯಕತೆಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ನಮ್ಮ ಪ್ರತಿ ಸ್ಪರ್ಧಿಗಳಂತೆ ನಾವೂ ನಮ್ಮ ಏಶ್ಯದ ಮಾರುಕಟ್ಟೆಗಾಗಿ ಭಾರತವನ್ನು ಪ್ರಮುಖವಾಗಿ ಗುರಿಯಿರಿಸಿದ್ದೇವೆ’’ ಎಂದು ಅವರು ನುಡಿದರು.
ಭಾರತಕ್ಕೆ ಈಗ ಮಾಡಲಾಗುತ್ತಿರುವ ರಫ್ತನ್ನು ದಿನಕ್ಕೆ ಎರಡು ಲಕ್ಷ ಬ್ಯಾರಲ್‌ನಷ್ಟು ಹೆಚ್ಚಿಸುವ ನಿರೀಕ್ಷೆಯನ್ನು ಇರಾನ್ ಹೊಂದಿದೆ. ಪ್ರಸಕ್ತ, ದಿಗ್ಬಂಧನೆ ನಿಯಮಗಳಡಿ ದಿನಕ್ಕೆ 2.6 ಲಕ್ಷ ಬ್ಯಾರಲ್ ಕಚ್ಚಾ ತೈಲ ಭಾರತಕ್ಕೆ ರಫ್ತಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News