×
Ad

1500 ವರ್ಷಗಳ ಹಿಂದೆ ಕೃತಕ ಕಾಲು ಬಳಸಿದ್ದ ವ್ಯಕ್ತಿ !

Update: 2016-01-16 19:43 IST

ವಾಶಿಂಗ್ಟನ್, ಜ. 16: 1500 ವರ್ಷಗಳ ಹಿಂದೆ ಯುರೋಪ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಎಡ ಪಾದವಿರಲಿಲ್ಲ. ಬದಲಿಗೆ, ಆ ವ್ಯಕ್ತಿ ಮರದ ಕೃತಕ ಕಾಲೊಂದನ್ನು ಬಳಸುತ್ತಿದ್ದನು.

ದಕ್ಷಿಣ ಆಸ್ಟ್ರಿಯದ ಹೆಮ್ಮಾಬರ್ಗ್‌ನಲ್ಲಿ ಉತ್ಖನನ ನಡೆಸುತ್ತಿರುವ ಪುರಾತನ ಶಾಸ್ತ್ರಜ್ಞರು 2013ರಲ್ಲಿ ಈ ವ್ಯಕ್ತಿಯ ಗೋರಿಯನ್ನು ಪತ್ತೆಹಚ್ಚಿದ್ದರು. ಆದರೆ, ಆ ವ್ಯಕ್ತಿ ಹೊಂದಿದ್ದ ಕೃತಕ ಕಾಲುಗಳ ಬಗ್ಗೆ ಇತ್ತೀಚೆಗಷ್ಟೇ ವಿವರಗಳನ್ನು ಒದಗಿಸಿದ್ದಾರೆ. ಈ ಮಾಹಿತಿಯನ್ನು ‘ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಪ್ಯಾಲಿಯೊಪೆತಾಲಜಿ’ಯಲ್ಲಿ ಪ್ರಕಟಿಸಲಾಗುವುದು.

 ‘‘ಇದು ಯುರೋಪ್‌ನಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ಕೃತಕ ಕಾಲುಗಳ ಪೈಕಿ ಅತ್ಯಂತ ಹಳೆಯದಾಗಿದೆ’’ ಎಂದು ಅಧ್ಯಯನದ ಲೇಖಕರು ಬರೆಯುತ್ತಾರೆ.ಮಧ್ಯ ವಯಸ್ಕ ವ್ಯಕ್ತಿಯ ಎಡ ಪಾದ ಇರಲಿಲ್ಲ ಹಾಗೂ ಅದರ ಜಾಗದಲ್ಲಿ ಒಂದು ಕಬ್ಬಿಣದ ಉಂಗುರ ಮತ್ತು ಮರದ ತುಂಡುಗಳು ಇದ್ದವು ಎಂದು ಸಂಶೋಧಕರು ಹೇಳುತ್ತಾರೆ. ವ್ಯಕ್ತಿಯ ಪಾದ ತುಂಡಾಗಿತ್ತು ಹಾಗೂ ಅದರ ಗಾಯ ಗುಣವಾಗಿತ್ತು ಎನ್ನುವುದನ್ನು ಸಂಶೋಧಕರು ರೇಡಿಯೊಗ್ರಫಿ ಮತ್ತು ಸಿಟಿ ಸ್ಕಾನಿಂಗ್ ಪರೀಕ್ಷೆಯಲ್ಲಿ ದೃಢಪಡಿಸಿಕೊಂಡರು.

‘‘ಆ ವ್ಯಕ್ತಿ ಈ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಕೃತಕ ಪಾದವನ್ನು ಜೋಡಿಸಿಕೊಂಡನು ಹಾಗೂ ಸಾಕಷ್ಟು ಚೆನ್ನಾಗಿಯೇ ನಡೆದಾಡಿದನು. ಕೃತಕ ಕಾಲಿನೊಂದಿಗೆ ಎರಡು ವರ್ಷ ಬದುಕಿರುವ ಸಾಧ್ಯತೆಯಿದೆ’’ ಎಂದು ಆಸ್ಟ್ರಿಯ ಪುರಾತತ್ವ ಸಂಸ್ಥೆಯ ಸ್ಯಾಬಿನ್ ಲ್ಯಾಡ್‌ಸ್ಟೇಟರ್ ಹೇಳುತ್ತಾರೆ.

ಆರನೆ ಶತಮಾನದಲ್ಲಿ ಬದುಕಿದ್ದ ಈ ವ್ಯಕ್ತಿ ಹೇಗೆ ತನ್ನ ಪಾದವನ್ನು ಕಳೆದುಕೊಂಡನೆಂಬುದು ಸ್ಪಷ್ಟವಿಲ್ಲ. ಆದರೆ, ಆತ ಉನ್ನತ ಸಾಮಾಜಿಕ ವರ್ಗಕ್ಕೆ ಸೇರಿದವನಾಗಿರಬೇಕು. ಯಾಕೆಂದರೆ, ಆತನನ್ನು ಚರ್ಚೊಂದರ ಸಮೀಪ ಖಡ್ಗದೊಂದಿಗೆ ಸಮಾಧಿ ಮಾಡಲಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News