ಮೂರನೆ ಟೆಸ್ಟ್: ತವರು ನೆಲದಲ್ಲೇ ಮುಗ್ಗರಿಸಿದ ಹರಿಣ ಪಡೆ
ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್, ಇಂಗ್ಲೆಂಡ್‌ಗೆ ಸರಣಿ ಜಯ
ಜೋಹಾನ್ಸ್‌ಬರ್ಗ್, ಜ.16: ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್(6-17) ಬಿರುಗಾಳಿ ವೇಗಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕ ತಂಡ ತವರು ನೆಲದಲ್ಲಿ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟಾಗುವ ಮೂಲಕ ಹೀನಾಯ ಸೋಲುಂಡಿದೆ.
10 ರನ್ ಹಿನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕ ತಂಡ ಬ್ರಾಡ್‌ರ ದಾಳಿಗೆ ತತ್ತರಿಸಿ 33.1 ಓವರ್‌ಗಳಲ್ಲಿ ಕೇವಲ 83 ರನ್‌ಗೆ ಆಲೌಟಾಯಿತು. ಗೆಲ್ಲಲು 74 ರನ್ ಗುರಿ ಪಡೆದ ಆಂಗ್ಲರು 22.4 ಓವರ್‌ಗಳಲ್ಲಿ ಗೆಲುವಿನ ರನ್ ಬಾರಿಸಿದರು. ನಾಯಕ ಅಲೆಸ್ಟೈರ್ ಕುಕ್(43) ಅಗ್ರ ಸ್ಕೋರರ್ ಎನಿಸಿಕೊಂಡರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಜಯಿಸಿದೆ. ಆಫ್ರಿಕ 2004-05ರ ನಂತರ ಇದೇ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ ಸ್ವದೇಶಿ ಸರಣಿ ಸೋತಿದೆ. ದಕ್ಷಿಣ ಆಫ್ರಿಕ 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ನಂತರ ಸ್ವದೇಶದಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾದ ಅಪಕೀರ್ತಿಗೆ ಗುರಿಯಾಯಿತು.
2006ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತದ ವಿರುದ್ಧ 84 ರನ್‌ಗೆ ಆಲೌಟಾಗಿದ್ದು ಈವರೆಗಿನ ಕಳಪೆ ಪ್ರದರ್ಶನವಾಗಿತ್ತು. ದಕ್ಷಿಣ ಆಫ್ರಿಕ 2015ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ನಾಗ್ಪುರ ಟೆಸ್ಟ್‌ನಲ್ಲಿ ಕೇವಲ 79 ರನ್‌ಗೆ ಆಲೌಟಾಗಿ ಮುಖಭಂಗ ಅನುಭವಿಸಿತ್ತು.
ಆಫ್ರಿಕದ ಇನಿಂಗ್ಸ್‌ನಲ್ಲಿ ಆರಂಭಿಕ ದಾಂಡಿಗ ಎಲ್ಗರ್(15) ಅಗ್ರ ಸ್ಕೋರರ್ ಆಗಿದ್ದಾರೆ. ವ್ಯಾನ್ ಝಿಲ್(11), ಪ್ಲೆಸಿಸ್(14) ಹಾಗೂ ರಬಾಡ(16) ಎರಡಂಕೆ ಸ್ಕೋರ್ ದಾಖಲಿಸಿದರು. ನಾಯಕ ಎಬಿ ಡಿವಿಲಿಯರ್ಸ್ ಖಾತೆ ತೆರೆಯಲು ವಿಫಲರಾದರು. ಹಿರಿಯ ಆಟಗಾರ ಹಾಶಿಮ್ ಅಮ್ಲ ಕೇವಲ 5 ರನ್ ಗಳಿಸಿದರು.
ಮೂರನೆ ಟೆಸ್ಟ್‌ನ ಮೂರನೆ ದಿನವಾದ ಶನಿವಾರ 5 ವಿಕೆಟ್‌ಗೆ 238 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 323 ರನ್‌ಗೆ ಆಲೌಟಾಯಿತು. 20ರ ಹರೆಯದ ವೇಗದ ಬೌಲರ್ ರಬಾಡ 78 ರನ್‌ಗೆ 5 ವಿಕೆಟ್ ಕಬಳಿಸಿ ಇಂಗ್ಲೆಂಡ್‌ನ್ನು 323 ರನ್‌ಗೆ ನಿಯಂತ್ರಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ ಪ್ರಥಮ ಇನಿಂಗ್ಸ್: 313
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 323
(ಜೋ ರೂಟ್ 110, ಸ್ಟೋಕ್ಸ್ 58, ರಬಾಡ 5-78, ಮಾರ್ಕೆಲ್ 3-76)
ದಕ್ಷಿಣ ಆಫ್ರಿಕ ದ್ವಿತೀಯ ಇನಿಂಗ್ಸ್: 33.1 ಓವರ್‌ಗಳಲ್ಲಿ 83 ರನ್‌ಗೆ ಆಲೌಟ್
(ಎಲ್ಗರ್ 15, ಪ್ಲೆಸಿಸ್ 14, ಸ್ಟುವರ್ಟ್ ಬ್ರಾಡ್ 6-17, ಸ್ಟೋಕ್ಸ್ 2-24)
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್: 22.4 ಓವರ್‌ಗಳಲ್ಲಿ 74/3
(ಕುಕ್ 43, ಹ್ಯಾಲೆಸ್ 18, ಎಲ್ಗರ್ 2-10)
ಪಂದ್ಯಶ್ರೇಷ್ಟ: ಸ್ಟುವರ್ಟ್ ಬ್ರಾಡ್.