×
Ad

ಡಬ್ಲುಟಿಎ ರ್ಯಾಂಕಿಂಗ್: ಸಾನಿಯಾರೊಂದಿಗೆ ನಂ.1 ಸ್ಥಾನ ಹಂಚಿಕೊಂಡ ಮಾರ್ಟಿನಾ

Update: 2016-01-16 23:52 IST

 ಹೊಸದಿಲ್ಲಿ, ಜ.16: ಸ್ವಿಸ್‌ನ ಟೆನಿಸ್ ಸ್ಟಾರ್ ಮಾರ್ಟಿನಾ ಹಿಂಗಿಸ್ 16 ವರ್ಷಗಳ ನಂತರ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ.

  35ರ ಹರೆಯದ ಮಾರ್ಟಿನಾ ಅವರು ಶನಿವಾರ ಬಿಡುಗಡೆಯಾಗಿರುವ ಮಹಿಳೆಯರ ಟೆನಿಸ್ ಸಂಸ್ಥೆ(ಡಬ್ಲುಟಿಎ) ರ್ಯಾಂಕಿಂಗ್‌ನಲ್ಲಿ ಡಬಲ್ಸ್ ಜೊತೆಗಾರ್ತಿ ಸಾನಿಯಾ ಮಿರ್ಝಾ ಅವರೊಂದಿಗೆ ವಿಶ್ವದ ನಂ.1 ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಸೋಮವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ನಂ.1 ಸ್ಥಾನಕ್ಕೇರಿರುವ ಮಾರ್ಟಿನಾ ಹಾಗೂ ಸಾನಿಯಾ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ಜೊತೆಯಾಗಿರುವ ಸಾನಿಯಾ ಹಾಗೂ ಮಾರ್ಟಿನಾ ಶುಕ್ರವಾರ ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿಯನ್ನು ಜಯಿಸಿದ್ದರು. ಇದು ಈ ಇಬ್ಬರು ಗೆದ್ದುಕೊಂಡಿರುವ 11ನೆ ಟ್ರೋಫಿಯಾಗಿತ್ತು ಮಾರ್ಟಿನಾ ವೃತ್ತಿಜೀವನದ ಆರಂಭದಲ್ಲಿ 35 ವಾರಗಳ ಕಾಲ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದರು.

ಒಟ್ಟು ಆರು ಬಾರಿ ವಿಶ್ವದ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದರು. ಜೂ.8 ರಿಂದ ಆ.2, 1998, ಆ.17 ರಿಂದ ಅ.25,1998, ನ.2-22,1998, ಜೂ.7ರಿಂದ ಜು.4,1999, ಆ.2 ರಿಂದ 22,1999 ಹಾಗೂ ಜ.31 ರಿಂದ ಮಾ.19, 2000ರಲ್ಲಿ ನಂ.1 ಸ್ಥಾನಕ್ಕೇರಿದ್ದರು.

‘‘ನಮ್ಮ ಹೆಸರಿನ ಎದುರು ನಂ.1 ರ್ಯಾಂಕ್ ಬಂದಾಗ ಆಗುವ ಅನುಭವ ವಿಶಿಷ್ಟವಾದುದು. ಇದು ನನ್ನ ಮುಂದಿರುವ ಗುರಿಯಾಗಿತ್ತು. ಸಾನಿಯಾ ಕಳೆದ ವರ್ಷ ನಂ.1 ಸ್ಥಾನಕ್ಕೇರಿದಾಗ ತಾನು ಸಂತಸಪಟ್ಟಿದ್ದೆ’’ ಎಂದು ಮಾರ್ಟಿನಾ ಪ್ರತಿಕ್ರಿಯಿಸಿದರು.

‘‘ಮಾರ್ಟಿನಾ 16 ವರ್ಷಗಳ ನಂತರ ಮತ್ತೊಮ್ಮೆ ವಿಶ್ವದ ನಂ.1 ಆಟಗಾರ್ತಿಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನಾವೀಗ ನಂ.1 ತಂಡ ಮಾತ್ರವಲ್ಲ, ವೈಯಕ್ತಿಕವಾಗಿಯೂ ನಂ.1 ಸ್ಥಾನಕ್ಕೇರಿದ್ದೇವೆ’’ಎಂದು ಕಳೆದ ವರ್ಷ ಎಪ್ರಿಲ್‌ನಲ್ಲಿ ನಂ.1 ಸ್ಥಾನ ತಲುಪಿದ್ದ ಸಾನಿಯಾ ನುಡಿದರು.

ಸಾನಿಯಾ ಹಾಗೂ ಮಾರ್ಟಿನಾ ಸತತ 30 ಪಂದ್ಯಗಳನ್ನು ಜಯಿಸಿ ಹೊಸ ದಾಖಲೆ ಬರೆದಿದ್ದು, ಯುಎಸ್ ಓಪನ್, ಡಬ್ಲ್ಯುಟಿಎ ಫೈನಲ್ಸ್ ಸಹಿತ ಸತತ 7 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News