ಪಾಕ್ ತನಿಖಾ ತಂಡಕ್ಕೆ ವಾಯುನೆಲೆ ಪ್ರವೇಶಕ್ಕೆ ಅವಕಾಶ ಇಲ್ಲ: ಪರಿಕ್ಕರ್
ಜೈಪುರ: ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರದಾಳಿಯ ಸಂಬಂಧ ತನಿಖೆಗೆ ಆಗಮಿಸುತ್ತಿರುವ ಪಾಕಿಸ್ತಾನ ತಂಡ, ವಾಯುನೆಲೆಯ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಪ್ರಕಟಿಸಿದ್ದಾರೆ.
ತನಿಖಾ ತಂಡವನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಇಸ್ಲಾಮಾಬಾದ್ ಪ್ರಕಟಿಸಿದ ಬೆನ್ನಲ್ಲೇ ಭಾರತದ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ. "ಯಾರು ಬರಲು ಸಾಧ್ಯವಿಲ್ಲ. ನಮಗೆ ಮಾಹಿತಿ ನೀಡದೇ ಯಾರೂ ಬರಲು ಸಾಧ್ಯವಿಲ್ಲ. ಬದಲಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಬಗ್ಗೆ ಮಾಹಿತಿ ಪಡೆಯಲು ಭಾರತೀಯ ತನಿಖಾ ತಂಡ ಅಲ್ಲಿಗೆ ಭೇಟಿ ನೀಡಲು ಪಾಕಿಸ್ತಾನ ಅವಕಾಶ ಮಾಡಿಕೊಡಬೇಕು" ಎಂದು ಸ್ಪಷ್ಟಪಡಿಸಿದರು. ಪಾಕಿಸ್ತಾನದ ಜತೆ ನಮ್ಮ ರಕ್ಷಣಾ ವ್ಯವಸ್ಥೆಯ ವಿವರಗಳನ್ನು ಹಂಚಿಕೊಳ್ಳುವುದು ಎಷ್ಟು ಸೂಕ್ತ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು.
"ದಾಳಿ ನಡೆದಿರುವುದು ಭಾರತದ ಮೇಲೆ. ನಾವು ಅಮೂಲ್ಯ ಸೈನಿಕರನ್ನು ಕಳೆದುಕೊಂಡು ತಾಳ್ಮೆ ಕಳೆದುಕೊಂಡಿದ್ದೇವೆ. ಪಾಕಿಸ್ತಾನದ ಮೂಲದ ಉಗ್ರಸಂಘಟನೆಗಳು ತಮ್ಮ ನೆಲದಿಂದ ಕಾರ್ಯನಿರ್ವಹಿಸುವುದನ್ನು ತಡೆಯಲು ಇದು ಸೂಕ್ತ ಸಂದರ್ಭ. ಕನಿಷ್ಠ ಈ ದೇಶದ ರಕ್ಷಣಾ ಸಚಿವನಾಗಿ ನಾನು ತಾಳ್ಮೆ ಕಳೆದುಕೊಂಡಿದ್ದೇನೆ. ನಾವು ಇದನ್ನು ಸಹಿಸುವುದಿಲ್ಲ" ಎಂದು ಎಚ್ಚರಿಸಿದರು.