ಲಾಲೂ ಕಮಾಲ್: 15 ವರ್ಷದವರಿಗೂ ಆರ್‌ಜೆಡಿ ಸದಸ್ಯತ್ವ

Update: 2016-01-17 05:11 GMT

ಪಾಟ್ನಾ: ಯುವಕರನ್ನು ಪಕ್ಷದತ್ತ ಆಕರ್ಷಿಸುವ ಪ್ರಯತ್ನವಾಗಿ 15 ವರ್ಷದ ಯುವಕರಿಗೂ ಆರ್‌ಜೆಡಿ ಸದಸ್ಯತ್ವ ನೀಡಲು ಲಾಲೂ ಪ್ರಸಾದ್ ನೇತೃತ್ವದ ರಾಷ್ಟ್ರೀಯ ಜನತಾದಳ ನಿರ್ಧರಿಸಿದೆ. ಪಾಟ್ನಾದಲ್ಲಿ ನಡೆದ ಶನಿವಾರ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬಂಧ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ.
ಎಲ್ಲ ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಪಡೆಯಲು ಕನಿಷ್ಠ 18 ವರ್ಷ ಆಗಿರಬೇಕು. "ಪಕ್ಷದ ಹುದ್ದೆಯನ್ನು ನಿರ್ವಹಿಸಲು ಯಾವುದೇ ಕನಿಷ್ಠ ವಯೋಮಿತಿ ಇಲ್ಲ. ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ಆ ಹುದ್ದೆಗೆ ಚುನಾಯಿತರಾಗುವ ಯಾವ ಸದಸ್ಯರೂ ಅಧ್ಯಕ್ಷರಾಗಬಹುದು" ಎಂದು ಪಕ್ಷದ ವಕ್ತಾರ ಚಿತ್ತರಂಜನ್ ಗಗನ್ ಸಮರ್ಥಿಸಿಕೊಂಡಿದ್ದಾರೆ.
ಪಕ್ಷದ ಸಂವಿಧಾನಕ್ಕೆ ತಂದಿರುವ ಇತರ ಪ್ರಮುಖ ತಿದ್ದುಪಡಿಯೆಂದರೆ ಪಕ್ಷದ ರಾಷ್ಟ್ರೀಯ ಮಂಡಳಿಯ ಸದಸ್ಯತ್ವವನ್ನು 75ರಿಂದ 84 ಮಂದಿಗೆ ವಿಸ್ತರಿಸಿರುವುದು. ಅಧ್ಯಕ್ಷ ಹಾಗೂ 84 ಸದಸ್ಯರು ಮಂಡಳಿಯಲ್ಲಿರುತ್ತಾರೆ. ರಾಷ್ಟ್ರೀಯ ಅಧ್ಯಕ್ಷರು ಐದು ಮಂದಿ ಉಪಾಧ್ಯಕ್ಷರು, ಒಬ್ಬ ಮಹಾಪ್ರಧಾನ ಕಾರ್ಯದರ್ಶಿ, ಒಬ್ಬ ಖಜಾಂಚಿ, 12 ಮಂದಿ ಪ್ರಧಾನ ಕಾರ್ಯದರ್ಶಿಗಳು ಹಾಗೂ 12 ಮಂದಿ ಕಾರ್ಯದರ್ಶಿಗಳನ್ನು ನೇಮಕ ಮಾಡಬಹುದಾಗಿದೆ. ಅಂತೆಯೇ ರಾಜ್ಯ ಮಂಡಳಿಗೆ ಹಿಂದೆ ಇದ್ದ 65 ಮಂದಿಯ ಬದಲಾಗಿ 121 ಮಂದಿಯನ್ನು ನೇಮಕ ಮಾಡಿಕೊಳ್ಳುವ ತಿದ್ದುಪಡಿ ತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News