ಯುವತಿಗೆ ಹಲ್ಲೆ ಆರೋಪ: ನಟ ನವಾಝುದ್ದೀನ್ ವಿರುದ್ಧ ಎಫ್‌ಐಆರ್
ಮುಂಬೈ, ಜ.17: ಕಾರು ಪಾರ್ಕಿಂಗ್ ವಿವಾದದ ಹಿನ್ನೆಲೆಯಲ್ಲಿ ಯುವತಿಯೊಬ್ಬಳನ್ನು ನಿಂದಿಸಿದ ಹಾಗೂ ಹಲ್ಲೆ ನಡೆಸಿದ ಆರೋಪದಲ್ಲಿ ಖ್ಯಾತ ಬಾಲಿವುಡ್ ನಟ ನವಾಝುದ್ದೀನ್ ಸಿದ್ದೀಕ್ ವಿರುದ್ಧ ಮುಂಬೈ ಪೊಲೀಸರು ರವಿವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಹೌಸಿಂಗ್ ಸೊಸೈಟಿ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳಕ್ಕೆ ಸಂಬಂಧಿಸಿ, ನವಾಝುದ್ದೀನ್ ಹಾಗೂ ತನ್ನ ನಡುವೆ ವಾಗ್ವಾದ ನಡೆದಿತ್ತು. ಆಗ ನವಾಝುದ್ದೀನ್ ತನ್ನ ಕೆನ್ನೆಗೆ ಹೊಡೆದಿದ್ದಾರೆ ಹಾಗೂ ನಿಂದಿಸಿದ್ದಾರೆಂದು ಹೀನಾಶೇಖ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಮಾತ್ರವಲ್ಲದೆ, ತನ್ನನ್ನು ಹೊರದಬ್ಬುವಂತೆ ಅವರ ಜೊತೆಗಿದ್ದ ಬೌನ್ಸರ್‌ಗಳಿಗೆ ತಿಳಿಸಿದರೆಂದು ಆಕೆ ಹೇಳಿದ್ದಾರೆ. ವರ್ಸೊವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರು ಬಾಲಿವುಡ್ ನಟನಿಗೆ ತಿಳಿಸಿದ್ದಾರೆ.
ತನ್ಮಧ್ಯೆ, ನವಾಝುದ್ದೀನ್ ಸಿದ್ದೀಕ್ ಅವರ ಸಹೋದರ ಫೈಝ್ ಸಿದ್ದೀಕ್ ಅವರು ಯುವತಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ.