ಪೇಜಾವರ ಭರವಸೆ; ಪುತ್ತಿಗೆ ವಿವಾದ ಸುಖಾಂತ್ಯ

Update: 2016-01-17 18:42 GMT

ಉಡುಪಿ, ಜ.17: ಕಳೆದೊಂದು ವಾರದಿಂದ ಕೆಲವು ವಿಷಯಗಳ ಕುರಿತು ಉಂಟಾದ ಗೊಂದಲದಿಂದ ಕೆಲವು ಬೆಳವಣಿಗೆಗಳಾಗಿದ್ದು, ಈಗ ಈ ಗೊಂದಲಗಳು ಬಗೆಹರಿದು ಸುಖಾಂತ್ಯಗೊಂಡಿದ್ದು, ಎಲ್ಲ ಸಮಸ್ಯೆಗಳು ಪರಿಹಾರಗೊಂಡಿವೆ. ಈ ಹಿನ್ನೆಲೆಯಲ್ಲಿ ಇಂದು ಪರ್ಯಾಯ ಪೀಠವನ್ನೇರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಮನವಿಯಂತೆ ತಾವು ಈ ಬಾರಿ ಮೆರವಣಿಗೆ ಹಾಗೂ ದರ್ಬಾರು ಸಭೆಯಿಂದ ದೂರ ಉಳಿಯುವುದಾಗಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ರವಿವಾರ ರಾತ್ರಿ 11 ಗಂಟೆಗೆ ಶ್ರೀಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
10 ದಿನಗಳ ಹಿಂದೆ ಬೆಂಗಳೂರಿನ ಕೆಲವರು ಉಡುಪಿಯ ಅಷ್ಟಮಠಗಳಿಗೆ ಸೇರಿದವರು ಬಂದು ನಮಗೆ (ಪುತ್ತಿಗೆ) ಹಾಗೂ ಶಿರೂರು ಮಠಾಧೀಶರಿಗೆ ಶಿಷ್ಯನನ್ನು ಸ್ವೀಕರಿಸುವ ಅಧಿಕಾರವಿಲ್ಲವೆಂದು ನಮ್ಮ ಮೇಲೆ ಒತ್ತಡ ಹೇರಿದ್ದಲ್ಲದೇ, ಈ ಕುರಿತು ಸತತವಾಗಿ ಲಾಯರ್ ನೋಟಿಸ್‌ಗಳನ್ನು ಕಳುಹಿಸಿದ್ದರು. ಇದಕ್ಕೆ ಸರಿಯಾಗಿ ಪೇಜಾವರ ಶ್ರೀ ಸಹ ಕೆಲವು ಬಾರಿ ನೀವು ಶಿಷ್ಯ ಸ್ವೀಕಾರ ಮಾಡುತ್ತೀರಾ ಎಂದು ಕೇಳತೊಡಗಿದ್ದರು ಎಂದರು.
  ನಮಗೆ ಈಗಲೇ ಶಿಷ್ಯ ಸ್ವೀಕಾರ ಮಾಡುವ ಆಲೋಚನೆ ಇರಲಿಲ್ಲ. 60-70ನೆ ವಯಸ್ಸಿನಲ್ಲಿ ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದೆವು. ಈ ಬೆಳವಣಿಗೆಗಳಿಂದ ವಿಚಲಿತವಾಗಿ ನಾವು ನಮ್ಮ ಮಠದ ಅಭಿಮಾನಿಗಳ ಒತ್ತಾಯದಂತೆ ಈ ಬಾರಿ ಮೆರವಣಿಗೆ ಹಾಗೂ ದರ್ಬಾರ್‌ಗಳಲ್ಲಿ ಭಾಗವಹಿಸುವ ದೃಢ ನಿಲುವನ್ನು ವ್ಯಕ್ತಪಡಿಸಿದ್ದು, ಈಗ ಪೇಜಾವರ ಶ್ರೀ ನಮ್ಮ ಅಧಿಕಾರದ ಕುರಿತು ಲಿಖಿತವಾಗಿ ನಮಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನಮ್ಮ ನಿರ್ಧಾರವನ್ನು ಬದಲಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News