ಪುಣೆ ಐಪಿಎಲ್ ತಂಡಕ್ಕೆ ಧೋನಿ ನಾಯಕ
ಪುಣೆ, ಜ.18: ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂಬರುವ ಐಪಿಎಲ್‌ನಲ್ಲಿ ಆಡಲಿರುವ ಹೊಸ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ತಂಡದ ಲಾಂಛನ ಹಾಗೂ ನಾಯಕನ ಹೆಸರನ್ನು ಅನಾವರಣಗೊಳಿಸಿದ ಪುಣೆ ತಂಡದ ಮಾಲಕ ಸಂಜೀವ್ ಗೊಯೆಂಕಾ ಮಾತನಾಡುತ್ತಾ, 2016ರ ಋತುವಿಗೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಧೋನಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲು ಸಂತೋಷವಾಗುತ್ತಿದ್ದು, ಅವರನ್ನು ತಂಡಕ್ಕೆ ಸ್ವಾಗತಿಸುತ್ತಿದ್ದೇನೆ ಎಂದು ಹೇಳಿದರು.
ಧೋನಿ ಅವರನ್ನು ಕೇವಲ ಒಂದು ಋತುವಿಗೆ ಮಾತ್ರ ನಾಯಕನಾಗಿ ಆಯ್ಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿದಾಗ, ಇದೀಗ ನಾವು 2016ರ ಋತುವಿನತ್ತ ಗಮನ ನೀಡುತ್ತಿದ್ದೇವೆ. ತಂಡವನ್ನು ಹೊಸತಾಗಿ ಕಟ್ಟಬೇಕಾಗಿದೆ. ಆದ್ದರಿಂದಾಗಿ ನಾವು ಧೋನಿ ಅವರನ್ನು ನಾಯಕರನ್ನಾಗಿ ನೇಮಿಸಿದ್ದೇವೆ ಎಂದರು.
ಆಸ್ಟ್ರೇಲಿಯ ನಾಯಕ ಸ್ಟೀವ್ ಸ್ಮಿತ್, ದಕ್ಷಿಣ ಆಫ್ರಿಕದ ಎಫ್‌ಡು ಪ್ಲೆಸಿಸ್, ಭಾರತದ ಅಜಿಂಕ್ಯ ರಹಾನೆ ಹಾಗೂ ಆರ್. ಅಶ್ವಿನ್ ಅವರನ್ನೊಳಗೊಂಡ ಪುಣೆ ತಂಡವನ್ನು ಧೋನಿ ನಾಯಕನಾಗಿ ಮುನ್ನಡೆಸಲಿದ್ದಾರೆ.