×
Ad

ರಾಮರಾಜಶೇಖರನ್ ದಲಿತರೆಂಬ ಕಾರಣಕ್ಕೆ ಈ ಪರಿ ಗೊಂದಲ?

Update: 2016-01-18 23:20 IST

 ದಲಿತ ವರ್ಗಕ್ಕೆ ಸೇರಿದ ಡಾ.ರಾಮರಾಜಶೇಖರನ್ ಮೈಸೂರಿನ ಸಿಎಫ್‌ಟಿಆರ್‌ಐಗೆ ನಿರ್ದೇಶಕರಾಗಿ ಬಂದಾಗಿನಿಂದ ಸಿಎಫ್‌ಟಿಆರ್‌ಐ ಭಾರೀ ಸುದ್ದಿಯಲ್ಲಿದೆ. ರಾಮರಾಜಶೇಖರನ್‌ರ ಸಣ್ಣಪುಟ್ಟ ಆಡಳಿತಾತ್ಮಕ ನಿಲುವುಗಳೂ ಬೀದಿಬದಿ ಚರ್ಚೆಯಾಗುತ್ತಿವೆ. ಈ ಸಂದರ್ಭದಲ್ಲಿ ಕನ್ನಡದ ಪ್ರಶ್ನೆಯೂ ಬಂದಿದೆ. ಪ್ರಶ್ನೆಯೇನೆಂದರೆ ರಾಮರಾಜಶೇಖರನ್‌ರ ವಿರುದ್ಧದ ಈ ಚರ್ಚೆ ಕನ್ನಡದ ಕಾಳಜಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದೆಯೋ ಅಥವಾ ದಲಿತವಿರೋಧಿ ನೆಲೆಯಲ್ಲಿ ಹುಟ್ಟಿಕೊಂಡಿದೆಯೋ ಎಂಬುದು. ಯಾಕೆಂದರೆ ಸಿಎಫ್‌ಟಿಆರ್‌ಐ, ಸಿಎಸ್‌ಆರ್‌ಟಿಐ, ಸಿಐಐಎಲ್, ಡಿಎಫ್‌ಆರ್‌ಎಲ್ ಹೀಗೆ ಮೈಸೂರಿನಲ್ಲಿರುವ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಇದುವರೆಗೆ ಕನ್ನಡೇತರ ಅನೇಕ ನಿರ್ದೇಶಕರುಗಳು ಬಂದುಹೋಗಿದ್ದಾರೆ. ಆವಾಗೆಲ್ಲ ಹುಟ್ಟದ ಕನ್ನಡದ ಈ ಪ್ರಶ್ನೆ ರಾಮರಾಜಶೇಖರನ್‌ರ ಕಾಲದಲ್ಲೇ ಮಾತ್ರ ಯಾಕೆ ಎಂಬುದು? ಈ ಹಿನ್ನೆಲೆಯಲ್ಲಿ ರಾಮರಾಜಶೇಖರನ್ ದಲಿತರು, ಅದಕ್ಕಾಗಿ ಈ ಕನ್ನಡದ ಪ್ರಶ್ನೆ ಹುಟ್ಟಿಕೊಂಡಿದೆ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಇನ್ನು ಕನ್ನಡದ್ದೇ ಪ್ರಶ್ನೆ! ಏಕೆಂದರೆ ಅಧಿಕಾರಿಯೊಬ್ಬ ಮುಖ್ಯವಾಗಿ ಎದುರಿಸುವುದು ಭ್ರಷ್ಟಾಚಾರದ ಪ್ರಕರಣವನ್ನು. ಅಂದಹಾಗೆ ದಲಿತ ವರ್ಗಕ್ಕೆ ಸೇರಿದ ರಾಮರಾಜಶೇಖರನ್ ಪ್ರಕರಣದಲ್ಲಿ ಭ್ರಷ್ಟಾಚಾರದ ಗಂಧಗಾಳಿ ಇಲ್ಲ. ಆದರೂ ಅವರನ್ನು ವಿರೋಧಿಸಬೇಕು, ಆ ಕಾರಣಕ್ಕಾಗಿ ಅನ್ಯಭಾಷಿಕರಾದ ರಾಮರಾಜಶೇಖರನ್ ವಿರುದ್ಧ ಕನ್ನಡದ ಪ್ರಶ್ನೆ ಎತ್ತಿದರೆ ಹೇಗೆ ಎಂಬ ಐಡಿಯಾ ಅವರ ವಿರೋಧಿ ಗುಂಪಿನಲ್ಲಿ ಮೂಡಿರಬಹುದು ಎಂಬ ಅನುಮಾನ ಪ್ರಜ್ಞಾವಂತರನ್ನು ಸಹಜವಾಗಿ ಕಾಡುತ್ತದೆ ಮತ್ತು ಇದು ನಿಜವೇ ಆಗಿದ್ದರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿರದು. ಈ ಹಿನ್ನೆಲೆಯಲ್ಲಿ ನಡೆಯಬೇಕಾದ್ದೆಂದರೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಮೈಸೂರಿನಲ್ಲಿರುವ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಬಂದಿರುವ ಅಧಿಕಾರಿಗಳೆಷ್ಟು ಮತ್ತು ಅವರು ಮಾಡಿರುವ ಕನ್ನಡದ ಕೈಂಕರ್ಯವೆಷ್ಟು ಎಂಬ ಬಗ್ಗೆ ಸಮೀಕ್ಷೆ. ತದನಂತರವೇ ರಾಮರಾಜಶೇಖರನ್ ಕನ್ನಡದ ಪರವೇ ಅಲ್ಲವೇ ಎಂಬುದು ತಿಳಿಯುತ್ತದೆ. ಇದು ನಡೆಯದಿದ್ದರೆ ರಾಮರಾಜಶೇಖರನ್ ದಲಿತರೆಂಬ ಏಕೈಕ ಕಾರಣಕ್ಕೆ ವ್ಯವಸ್ಥೆ ಅವರ ವಿರುದ್ಧ ಹೀಗೆ ಮುಗಿಬಿದ್ದಿದೆ ಎಂಬ ಅನುಮಾನ ನಿಜವೆನಿಸುತ್ತದೆ. ದೇಶಾದ್ಯಂತ ಇಂದು ಅಸಹಿಷ್ಣುತೆ ಸದ್ದು ಮಾಡುತ್ತಿದೆ. ಅಂತಹ ಅಸಹಿಷ್ಣುತೆ ನಿಜವಾಗಿ ಶತಮಾನಗಳಿಂದ ಆಚರಿಸಲ್ಪಡುತ್ತಿರುವುದು ದಲಿತರ ಮೇಲೆ. ಅದರಲ್ಲೂ ಈಚಿನ ದಿನಗಳಲ್ಲಿ ಅಕ್ಷರ ಕಲಿತು ಉನ್ನತ ಹುದ್ದೆಗಳಲ್ಲಿರುವ ದಲಿತರ ಮೇಲೆ. ತಳಮಟ್ಟದಲ್ಲಿದ್ದವರು ಉನ್ನತಮಟ್ಟಕ್ಕೆ ಹೋಗಿದ್ದಾರಲ್ಲ ಅವರ ಕೈಕೆಳಗೆ ಕೆಲಸ ಮಾಡಬೇಕಾ ಎಂಬ ಅಸಹಿಷ್ಣುತೆ ಅದು. ಈ ನಿಟ್ಟಿನಲ್ಲಿ ಇಂತಹ ದಲಿತರ ವಿರುದ್ಧದ ಅಸಹಿಷ್ಣುತೆಗೆ ಜಯಸಿಗಬೇಕೆ? ಯೋಚಿಸುವ ಸರದಿ ಸಮಾನತೆ ಬಯಸುವ ಎಲ್ಲ ಮನಸ್ಸುಗಳದ್ದು. -ರಘೋತ್ತಮ ಹೊ.ಬ, ಮಂಡ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News