ಸೊಮಾಲಿಯದಲ್ಲಿ 100ಕ್ಕೂ ಅಧಿಕ ಕೆನ್ಯ ಸೈನಿಕರ ಹತ್ಯೆ ಅಲ್-ಶಬಾಬ್
ನೈರೋಬಿ, ಜ. 18: ಸೊಮಾಲಿಯದಲ್ಲಿರುವ ಆಫಿಕನ್ ಒಕ್ಕೂಟದ ಸೇನಾ ನೆಲೆಯೊಂದರ ಮೇಲೆ ಶುಕ್ರವಾರ ನಡೆಸಿದ ದಾಳಿಯಲ್ಲಿ 100ಕ್ಕೂ ಅಧಿಕ ಕೆನ್ಯ ಸೈನಿಕರನ್ನು ಕೊಂದಿರುವುದಾಗಿ ಅಲ್-ಶಬಾಬ್ ಭಯೋತ್ಪಾದಕರು ಹೇಳಿಕೊಂಡಿದ್ದಾರೆ. ಅದೇ ವೇಳೆ, ಸೊಮಾಲಿಯದಲ್ಲಿ ಇಂದು ತನ್ನ ಸೈನಿಕರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕೆನ್ಯ ಹೇಳಿದೆ.
ನೈರುತ್ಯ ಸೊಮಾಲಿಯದಲ್ಲಿರುವ ಆಫ್ರಿಕ ಒಕ್ಕೂಟದ ಶಾಂತಿ ಪಾಲನಾ ಪಡೆಯ ನೆಲೆಯ ಮೇಲೆ ಅಲ್-ಶಬಾಬ್ ಉಗ್ರರು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದರು. ಆ ನೆಲೆಯಲ್ಲಿ ಕೆನ್ಯದ ಸೈನಿಕರಿದ್ದರು.
‘‘ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಾವು ಆದ್ಯತೆಯ ಮೇಲೆ ಕೈಗೆತ್ತಿಕೊಂಡಿದ್ದೇವೆ’’ ಎಂದು ಕೆನ್ಯ ಸೇನಾ ಮುಖ್ಯಸ್ಥ ಸ್ಯಾಮ್ಸನ್ ಮವಾತೆತೆ ರಾಜಧಾನಿ ನೈರೋಬಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘‘ನಮ್ಮ ಸೇನೆ ಭಯೋತ್ಪಾದಕರಿಗೆ ಮುಖಾಮುಖಿಯಾಗಿದೆ’’ ಎಂದರು.
ದಾಳಿಯಲ್ಲಿ ಎಷ್ಟು ಸೈನಿಕರು ಸಾವಿಗೀಡಾಗಿದ್ದಾರೆ, ಗಾಯಗೊಂಡಿದ್ದಾರೆ ಹಾಗೂ ನಾಪತ್ತೆಯಾಗಿದ್ದಾರೆ ಎಂಬುದನ್ನು ತಿಳಿಸಲು ಕೆನ್ಯ ಈವರೆಗೆ ನಿರಾಕರಿಸಿದೆ. ಆದರೆ, 100ಕ್ಕೂ ಅಧಿಕ ಕೆನ್ಯ ಸೈನಿಕರನ್ನು ಕೊಲ್ಲಲಾಗಿದೆ ಹಾಗೂ ಇತರರನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿಕೆಯೊಂದರಲ್ಲಿ ಶಬಾಬ್ ಹೇಳಿಕೊಂಡಿದೆ.