ಕೇಂದ್ರ ಸಚಿವ ಬಂಡಾರು ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ

Update: 2016-01-18 18:03 GMT

ಹೈದರಾಬಾದ್, ಜ.18: ಹೈದರಾಬಾದ್ ವಿವಿಯಲ್ಲಿ ದಲಿತ ರೋಹಿತ್ ಸಂಶೋಧನ ವಿದ್ಯಾರ್ಥಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪೊಲೀಸರು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ವಿವಿಯ ಉಪಕುಲಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಮಧ್ಯೆ ರೋಹಿತ್‌ರ ಸಾವಿನ ಕುರಿತು ಸಂತಾಪ ಹಾಗೂ ಆಕ್ರೋಶಗಳ ಪ್ರವಾಹವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯ ತೊಡಗಿದೆ.
ರೋಹಿತ್ ವೇಮುಲ ಹಾಗೂ ಇತರ ನಾಲ್ವರು ದಲಿತ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಿಂದ ವಜಾಗೊಳಿಸಲು ಪಿತೂರಿ ಹೂಡಿದ್ದ ಆರೋಪದಲ್ಲಿ ಪರಿಶಿಷ್ಟ ಜಾತಿ-ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯನ್ವಯ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ಪ್ರಕರಣ ದಾಖಲಿಸಿಲಾಗಿದೆಯೆಂದು ಗಚಿಬೌಲಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ಗೆ ಮರಣದಂಡನೆ ವಿಧಿಸಿದ್ದುದನ್ನು ಕೆಲವು ವಿದ್ಯಾರ್ಥಿ ಸಂಘಟನೆಗಳು 2015ರಲ್ಲಿ ಪ್ರತಿಭಟಿಸಿದ್ದವು. ಅದಕ್ಕೆ ಎಬಿವಿಪಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿತ್ತು. ಆ ವೇಳೆ ರೋಹಿತ್ ಎಬಿವಿಪಿ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ದತ್ತಾತ್ರೇಯ ಪ್ರಕರಣವನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಒಯ್ದಿದ್ದರು ಹಾಗೂ ರೋಹಿತ್ ಹಾಗೂ ಇತರ ನಾಲ್ವರು ದಲಿತ ವಿದ್ಯಾರ್ಥಿಗಳ ವಜಾಕ್ಕೆ ವಿವಿಯ ಮೇಲೆ ಒತ್ತಡ ಹೇರಿದ್ದರೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News