×
Ad

ಕೋಲ್‌ಮಾಲ್: ಎನ್‌ಡಿಎ ಮಾಜಿ ಸಚಿವ ದಿಲೀಪ್ ರೇಗೆ ಸಮನ್ಸ್

Update: 2016-01-18 23:37 IST

ಹೊಸದಿಲ್ಲಿ,ಜ.18: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿ 1999ರಲ್ಲಿ ಆಗಿನ ಎನ್‌ಡಿಎ ಸರಕಾರದಲ್ಲಿ ಕಲ್ಲಿದ್ದಲು ಖಾತೆಯ ಸಹಾಯಕ ಸಚಿವರಾಗಿದ್ದ, ದಿಲೀಪ್ ರೇ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯವು ಆರೋಪಿಯೆಂದು ಪರಿಗಣಿಸಿ, ಸಮನ್ಸ್ ನೀಡಿದೆ ಹಾಗೂ ಫೆಬ್ರವರಿ 26ಕ್ಕೆ ಮುನ್ನ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿದೆ.
  ರೇ ಅವರು, ಕಲ್ಲಿದ್ದಲು ಹಗರಣದಲ್ಲಿ ಆರೋಪಿಯಾಗಿ ನ್ಯಾಯಾಲಯದಿಂದ ವಿಚಾರಣೆಗಾಗಿ ಕರೆಸಲ್ಪಟ್ಟ ಎನ್‌ಡಿಎ ಸರಕಾರದ ಮೊದಲ ಸಚಿವರಾಗಿದ್ದಾರೆ.

  ರೇ ಅವರೊಂದಿಗೆ, ಆಗಿನ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬ್ಯಾನರ್ಜಿ, ಯೋಜನಾ ಸಲಹೆಗಾರ ನಿತ್ಯಾನಂದ ಮೆನನ್, ಕ್ಯಾಸ್ಟ್ರೋಜನ್ ಟೆಕ್ನಾಲಜೀಸ್ ಲಿಮಿಟೆಡ್ ಹಾಗೂ ಅದರ ನಿರ್ದೇಶಕ ಮಹೇಂದ್ರ ಕುಮಾರ್ ಮತ್ತು ಕ್ಯಾಸ್ಟ್ರನ್ ಮೈನಿಂಗ್ ಕಂಪೆನಿಯನ್ನು ಹಗರಣದ ಇತರ ಆರೋಪಿಗಳೆಂದು ನ್ಯಾಯಾಲಯವು ಹೆಸರಿಸಿ, ಸಮನ್ಸ್ ನೀಡಿದೆ.
  1999ರಲ್ಲಿ ಜಾರ್ಖಂಡ್‌ನ ಗಿರಿಧ್‌ನಲ್ಲಿ ಕ್ಯಾಸ್ಟ್ರನ್ ಟೆಕ್ನಾಲಜೀಸ್ ಸಂಸ್ಥೆಗೆ ಬ್ರಹ್ಮದಿಯಾ ಕಲ್ಲಿದ್ದಲು ನಿಕ್ಷೇಪದ ನೀಡಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆಯೆಂಬ ಆರೋಪಗಳಿಗೆ ಸಂಬಂಧಿಸಿ ನ್ಯಾಯಾಲಯ ಇವರ ವಿಚಾರಣೆ ನಡೆಸಲಿದೆ.
 ಮಾಜಿ ಸಚಿವ ದಿಲೀಪ್ ರೇ ಹಾಗೂ ಇತರ ಐದು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಕ್ರಿಮಿನಲ್ ಸೆಕ್ಷನ್‌ಗಳಾದ 120-ಬಿ (ಕ್ರಿಮಿನಲ್ ಸಂಚು), 420 (ವಂಚನೆ) ಹಾಗೂ 409 (ಕ್ರಿಮಿನಲ್ ನಂಬಿಕೆ ದ್ರೋಹ) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News