ಇರಾನ್ ವಿರುದ್ಧ ಅಮೆರಿಕದ ಹೊಸ ದಿಗ್ಬಂಧನ: ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆಗೆ ತಿರುಗೇಟು
ವಾಶಿಂಗ್ಟನ್, ಜ. 18: ಇರಾನ್‌ನ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆಯ ಹಿನ್ನೆಲೆಯಲ್ಲಿ ಅಮೆರಿಕ ರವಿವಾರ ಹೊಸದಾಗಿ ದಿಗ್ಬಂಧನೆಗಳನ್ನು ವಿಧಿಸಿದೆ.
ಅಮೆರಿಕವು ಇರಾನ್ ಜೊತೆಗೆ ವ್ಯವಹರಿಸುತ್ತದೆ ಹಾಗೂ ಅದೇ ವೇಳೆ, ಮಧ್ಯ ಪ್ರಾಚ್ಯದಲ್ಲಿನ ಅದರ ‘ಅಸ್ಥಿರಗೊಳಿಸುವ ವರ್ತನೆ’ಯನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದರು.
ಇರಾನ್‌ನಲ್ಲಿ ಬಂಧನದಲ್ಲಿದ್ದ ಅಮೆರಿಕನ್ ಒತ್ತೆಯಾಳುಗಳ ಬಿಡುಗಡೆಯಾದ ಬಳಿಕ, 11 ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಒಬಾಮ ದಿಗ್ಬಂಧನೆಗಳನ್ನು ಘೋಷಿಸಿದರು. ಇರಾನ್ ಅಕ್ಟೋಬರ್‌ನಲ್ಲಿ ನಡೆಸಿದ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷೆಗೆ ಪ್ರತಿಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಒಬಾಮ ಘೋಷಿಸಿದರು.
‘‘ನಮ್ಮ ಅಥವಾ ನಮ್ಮ ಮಿತ್ರ ಪಕ್ಷಗಳ ಅಥವಾ ಭಾಗೀದಾರರ ಭದ್ರತೆಯನ್ನು ಅಪಾಯಕ್ಕೆ ಗುರಿಪಡಿಸಲು ನಾವು ಇಚ್ಛಿಸುವುದಿಲ್ಲ’’ ಎಂದು ಒಬಾಮ ನುಡಿದರು.
ಇರಾನ್ ವಿರುದ್ಧ ದಿಗ್ಬಂಧನೆಗಳನ್ನು ಘೋಷಿಸುವುದರೊಂದಿಗೆ, ತನ್ನ ಕ್ರಮಗಳು ಭಯೋತ್ಪಾದನೆ ಹರಡಲು ನೆರವು ನೀಡಿದ ದೇಶವೊಂದನ್ನು ಸಂತುಷ್ಟಗೊಳಿಸಿವೆ ಎಂಬ ರಿಪಬ್ಲಿಕನ್ ಸಂಸದರು ಮತ್ತು ಆ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳು ಮಾಡಿರುವ ಟೀಕೆಗಳಿಗೆ ಉತ್ತರ ನೀಡುವ ಯತ್ನವನ್ನೂ ಒಬಾಮ ಮಾಡಿದ್ದಾರೆ.
11 ಹೊಸ ದಿಗ್ಬಂಧನಗಳು ಅಕ್ರಮ: ಇರಾನ್ ದುಬೈ, ಜ. 18: ಮಧ್ಯ ಪ್ರಾಚ್ಯದಲ್ಲಿ ಅಮೆರಿಕದ ಶಸ್ತ್ರಾಸ್ತ್ರ ಮಾರಾಟವನ್ನು ಗಣನೆಗೆ ತೆಗೆದುಕೊಂಡರೆ, ತನ್ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮದ ಮೇಲೆ ಅಮೆರಿಕ ಹೊಸದಾಗಿ ವಿಧಿಸಿರುವ ದಿಗ್ಬಂಧನೆಗಳು ಅಕ್ರಮ ಎಂದು ಇರಾನ್ ಸೋಮವಾರ ಹೇಳಿದೆ.
‘‘ಇರಾನ್‌ನ ಪ್ರಕ್ಷೇಪಕ ಕ್ಷಿಪಣಿ ಕಾರ್ಯಕ್ರಮದ ವಿರುದ್ಧ ಅಮೆರಿಕ ವಿಧಿಸಿರುವ ದಿಗ್ಬಂಧನಗಳು ಕಾನೂನು ಅಥವಾ ನೈತಿಕ ಸಮ್ಮತವನ್ನು ಹೊಂದಿಲ್ಲ’’ ಎಂದು ಇರಾನ್‌ನ ವಿದೇಶ ಸಚಿವಾಲಯದ ವಕ್ತಾರ ಹುಸೈನ್ ಜಬೇರಿ ಅನ್ಸಾರಿ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
‘‘ಈ ವಲಯದಲ್ಲಿರುವ ದೇಶಗಳಿಗೆ ಅಮೆರಿಕ ಸಾವಿರಾರು ಕೋಟಿ ಡಾಲರ್ ವೌಲ್ಯದ ಶಸ್ತ್ರಾಸ್ತ್ರಗಳನ್ನು ಪ್ರತಿ ವರ್ಷ ಮಾರಾಟ ಮಾಡುತ್ತಿದೆ. ಈ ಶಸ್ತ್ರಾಸ್ತ್ರಗಳನ್ನು ಫೆಲೆಸ್ತೀನ್, ಲೆಬನಾನ್ ಮತ್ತು ತೀರಾ ಇತ್ತೀಚೆಗೆ ಯಮನ್ ನಾಗರಿಕರ ವಿರುದ್ಧದ ಯುದ್ಧಾಪರಾಧಗಳಿಗಾಗಿ ಬಳಸಲಾಗುತ್ತಿದೆ’’ ಎಂದು ಅವರು ಹೇಳಿದರು.