×
Ad

ಬ್ರಿಟನ್‌ನಿಂದ ಇಂಗ್ಲಿಷ್ ಬಾರದ ತಾಯಂದಿರ ಗಡಿಪಾರು

Update: 2016-01-18 23:41 IST

ತಂದೆ-ಮಕ್ಕಳು ಬ್ರಿಟನ್‌ನಲ್ಲಿ, ತಾಯಂದಿರು ತಮ್ಮ ದೇಶದಲ್ಲಿ!

ಲಂಡನ್, ಜ. 18: ಇಂಗ್ಲೆಂಡ್‌ನಲ್ಲಿ ಕಡ್ಡಾಯಗೊಳಿಸ ಲಾಗಿರುವ ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರನ್ನು ಗಡಿಪಾರುಗೊಳಿಸಲಾಗುವುದು ಎಂದು ಪ್ರಧಾನಿ ಡೇವಿಡ್ ಕ್ಯಾಮರೂನ್ ಸ್ಪಷ್ಟಪಡಿಸಿದ್ದಾರೆ.
ಹೀಗಾದರೆ, ಹಲವು ವರ್ಷಗಳಿಂದ ಬ್ರಿಟನ್‌ನಲ್ಲಿ ನೆಲೆಸಿರುವ ಕುಟುಂಬಗಳು ಒಡೆಯಬಹುದಾಗಿದೆ. ಯಾಕೆಂದರೆ, ತಾಯಂದಿರನ್ನು ಗಡಿಪಾರು ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಬ್ರಿಟನ್‌ನಲ್ಲಿ ನೆಲೆಸಿರುವ ಗಂಡ ಅಥವಾ ಹೆಂಡತಿ ಜೊತೆಗೆ ವಾಸಿಸಲು ಬರುವ ಅವರ ಸಂಗಾತಿಗಳಿಗೆ ನಡೆಸಲಾಗುವ ಇಂಗ್ಲಿಷ್ ಭಾಷಾ ಪರೀಕ್ಷೆಯ ರೂಪು ರೇಷೆಗಳನ್ನು ಪ್ರಧಾನಿ ಸೋಮವಾರ ರೂಪಿಸಿದರು. ಈ ಯೋಜನೆಯ ಪ್ರಕಾರ, ಗಂಡ ಅಥವಾ ಹೆಂಡತಿಯೊಂದಿಗೆ ವಾಸಿಸಲು ಬರುವ ಸಂಗಾತಿಗಳು ಬ್ರಿಟನ್‌ಗೆ ಆಗಮಿಸಿದ ಎರಡೂವರೆ ವರ್ಷದ ಬಳಿಕ ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.ಒಂದು ವೇಳೆ ಅವರು ಪರೀಕ್ಷೆಯಲ್ಲಿ ವಿಫಲರಾದರೆ ಬ್ರಿಟನ್‌ನಲ್ಲಿ ವಾಸಿಸುವ ಅವರ ಹಕ್ಕನ್ನು ಹಿಂದಕ್ಕೆ ಪಡೆದು ಅವರ ಮೂಲ ದೇಶಕ್ಕೆ ಗಡಿಪಾರು ಮಾಡಬಹುದಾಗಿದೆ ಎಂದು ಪ್ರಧಾನಿ ಹೇಳಿದರು. ಸಂಗಾತಿ ಜೊತೆಗೆ ವಾಸಿಸುವ ಕಾರ್ಯಕ್ರಮದಡಿಯಲ್ಲಿ ಬ್ರಿಟನ್‌ಗೆ ಬರುವ ಮಹಿಳೆಯರಿಗೆ ಬ್ರಿಟನ್‌ನಲ್ಲಿ ಮಕ್ಕಳಿದ್ದರೂ ಅವರನ್ನು ಗಡಿಪಾರು ಮಾಡಲಾಗುವುದೇ ಎಂದು ಬಿಬಿಸಿ ರೇಡಿಯೊ ಸಂದರ್ಶನವೊಂದರಲ್ಲಿ ಕ್ಯಾಮರೂನ್‌ರನ್ನು ಪ್ರಶ್ನಿಸಲಾಯಿತು.
‘‘ಆಗ, ಅವರು ಬ್ರಿಟನ್‌ನಲ್ಲಿ ಉಳಿಯುವ ಬಗ್ಗೆ ಖಾತರಿಯನ್ನು ಇಟ್ಟುಕೊಳ್ಳಬಾರದು’’ ಎಂದು ಕ್ಯಾಮರೂನ್ ಹೇಳಿದರು. ಬ್ರಿಟನ್‌ನಲ್ಲೇ ಜನಿಸಿದ ಮಕ್ಕಳು ಸಹಜವಾಗಿಯೇ ಬ್ರಿಟಿಶ್ ಪೌರತ್ವ ಪಡೆಯುತ್ತಾರೆ. ಹಾಗೂ ಅಂಥ ಮಕ್ಕಳಿಗೆ ತಂದೆಯ ಜೊತೆ ಬ್ರಿಟನ್‌ನಲ್ಲಿ ವಾಸಿಸಲು ಅನುಮತಿ ನೀಡಲಾಗುವುದು. ಆದರೆ, ಅವರ ತಾಯಂದಿರಿಗೆ ಆ ಅವಕಾಶವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News