×
Ad

ಬಿಳಿಯಾಗದ ತ್ವಚೆ: ಸಾಬೂನು ಕಂಪೆನಿಯಿಂದ 30 ಸಾವಿರ ರೂ. ಪರಿಹಾರ ಪಡೆದ ಗ್ರಾಹಕ

Update: 2016-01-18 23:44 IST

ಹೊಸದಿಲ್ಲಿ,ಜ.18: ಸೌಂದರ್ಯ ಉತ್ಪನ್ನಗಳಿಗೆ ಪ್ರಚಾರ ನೀಡುವ ಮುನ್ನ ಸಿಲೆಬ್ರಿಟಿಗಳು ಇನ್ನು ಮುಂದೆ ಜಾಗರೂಕತೆ ವಹಿಸುವುದು ಒಳಿತು. ಯಾಕೆಂದರೆ ತಾವು ಪ್ರಚಾರ ಮಾಡುವ ಉತ್ಪನ್ನದ ಪರಿಣಾಮಕಾರಿತ್ವದ ಬಗ್ಗೆ ಅವರು ಸುಳ್ಳು ಮಾಹಿತಿ ನೀಡಿದಲ್ಲಿ,ಅವರು ಕಾನೂನುಕ್ರಮವನ್ನು ಎದುರಿಸಬೇಕಾಗುವ ಸಾಧ್ಯತೆಯಿದೆ. ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಇದರ ಅನುಭವವಾಗಿದೆ. ಯಾಕೆಂದರೆ ಅವರು ರೂಪದರ್ಶಿಯಾಗಿ ಪ್ರಚಾರ ಮಾಡಿದ್ದ ಕೇರಳದ ಅತ್ಯಂತ ಜನಪ್ರಿಯ ಸ್ನಾನದ ಸಾಬೂನು ‘ಇಂದುಲೇಖಾ’ ತನ್ನ ಪರಿಣಾಮಕಾರಿತ್ವದ ಬಗ್ಗೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಗ್ರಾಹಕರೊಬ್ಬರು ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದ್ದರಿಂದ,ಕಂಪೆನಿಯು ಆತನಿಗೆ 30 ಸಾವಿರ ರೂ. ಪರಿಹಾರ ನೀಡಬೇಕಾಯಿತು.
ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಗ್ರಾಮದ, 67 ವರ್ಷ ವಯಸ್ಸಿನ ಕೆ.ಚಾತು, ನ್ಯಾಯಾಲಯದಿಂದ 30 ಸಾವಿರ ರೂ. ಪರಿಹಾರ ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಮ್ಮುಟ್ಟಿ ಪ್ರಚಾರ ಮಾಡಿದ ಇಂದುಲೇಖಾ ಸೋಪ್ ಕಂಪೆನಿಯು ತಪ್ಪು ಮಾಹಿತಿ ನೀಡಿದೆಯೆಂದು ಆರೋಪಿಸಿ ಚಾತು, ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿ 50 ಸಾವಿರ ರೂ. ಪರಿಹಾರ ಕೋರಿದ್ದರು.
    ಇಂದುಲೇಖಾ ಸೋಪ್‌ನ ಬಳಕೆದಾರನ ತ್ವಚೆ ಗೌರವರ್ಣವನ್ನು ಪಡೆಯುವುದು ಎಂದು ಜಾಹೀರಾತು ಪ್ರಚಾರ ಮಾಡಿತ್ತು. ‘ಈ ಜಾಹೀರಾತನ್ನು ಪ್ರಚಾರ ಮಾಡಿದ ಮಮ್ಮುಟ್ಟಿ, ಓರ್ವ ದೊಡ್ಡ ನಟ. ನಾವು ಆತನ ಮೇಲೆ ವಿಶ್ವಾಸವಿರಿಸಿದ್ದೆವು. ಆದರೆ ಈ ಸೋಪ್ ಬಳಸಿದರೂ ನಾನು ಕಪ್ಪಾಗಿಯೇ ಉಳಿದಿದ್ದೇನೆ’ಎಂದು ಚಾತು ದೂರಿನಲ್ಲಿ ತಿಳಿಸಿದ್ದರು. ಆದರೆ ಇಂದುಲೇಖಾ ಕಂಪೆನಿಯು ಕಾನೂನು ಹೋರಾಟವನ್ನು ನಡೆಸಲು ಇಚ್ಛಿಸದೆ, ಪ್ರಕರಣವನ್ನು ಸಂಧಾನದಲ್ಲಿ ಮುಕ್ತಾಯಗೊಳಿಸಲು ಇಚ್ಛಿಸಿತು ಹಾಗೂ ಪರಿಹಾರವಾಗಿ ಚಾತುವಿಗೆ 30 ಸಾವಿರ ರೂ. ಪರಿಹಾರ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News