ದಲಿತ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ
ಕೇಂದ್ರ ಸಚಿವ ಬಂಡಾರು, ಹೈದರಾಬಾದ್ ವಿವಿ. ಉಪಕುಲಪತಿ ವಿರುದ್ಧ ಪ್ರಕರಣ ದಾಖಲು
ಸಾವಿನ ಹಿಂದೆ ಎಬಿವಿಪಿ ರಾಜಕೀಯ ಕೇಂದ್ರದಿಂದ ಸತ್ಯ ಶೋಧನಾ ಸಮಿತಿ ರಚನೆ
ದೇಶಾದ್ಯಂತ ದಲಿತ ಸಂಘಟನೆಗಳ ಆಕ್ರೋಶ, ಪ್ರತಿಭಟನೆ
ಹೈದರಾಬಾದ್, ಜ.18: ಪ್ರತಿಭಟನೆಗೆ ಸಂಬಂಧಿಸಿದ ಘಟನೆಯೊಂದರಲ್ಲಿ, ಕಳೆದ ವರ್ಷ ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ವಜಾಗೊಳಿಸಲಾಗಿದ್ದ ಐವರು ದಲಿತ ಸಂಶೋಧನ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ರೋಹಿತ್ ವೇಮುಲ ಎಂಬವರು ರವಿವಾರ ಹಾಸ್ಟೆಲ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಟೂರು ನಿವಾಸಿ, 25ರ ಹರೆಯದ ರೋಹಿತ್, ಕಳೆದೆರಡು ವರ್ಷಗಳಿಂದ ವಿಜ್ಞಾನ ತಂತ್ರಜ್ಞಾನ ಹಾಗೂ ಸಮಾಜ ಅಧ್ಯಯನದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ಜಗಳದಲ್ಲಿ ಸೇರಿಕೊಂಡು ಎಬಿವಿಪಿಗೆ ಸೇರಿದ್ದ ವಿದ್ಯಾರ್ಥಿ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿದ್ದರೆಂದು ಆರೋಪಿಸಿ ವಜಾಗೊಳಿಸಲಾಗಿದೆ. ವಿಶ್ವವಿದ್ಯಾನಿಲಯದ ಆಡಳಿತವು ಈ ಬಗ್ಗೆ ತನಿಖೆಯೊಂದಕ್ಕೆ ಆದೇಶಿಸಿತ್ತು. ವಿವಿಯ ಶಿಸ್ತು ಸಮಿತಿ ಅಂತಿಮ ನಿರ್ಧಾರವೊಂದನ್ನು ಕೈಗೊಂಡು ರೋಹಿತ್ ಹಾಗೂ ಇತರ ನಾಲ್ವರನ್ನು ವಜಾಗೊಳಿಸಿತ್ತು. ಕೇಂದ್ರ ಸಚಿವರ ಒತ್ತಡ ಮತ್ತು ವಿವಿ ಕುಲಪತಿಯ ಕುಮ್ಮಕ್ಕಿನಿಂದ ದಲಿತ ವಿದ್ಯಾರ್ಥಿಗಳನ್ನು ವಜಾ ಮಾಡಲಾಗಿದ್ದು, ತಮ್ಮನ್ನು ಮರು ದಾಖಲುಗೊಳಿಸಬೇಕೆಂದು ಕಳೆದೆರಡು ವಾರಗಳಿಂದ ಈ ವಿದ್ಯಾರ್ಥಿಗಳು ಸತ್ಯಾಗ್ರಹ ನಡೆಸುತ್ತಿದ್ದರು.
ಆ ಬಳಿಕ ಆಡಳಿತವು ರೋಹಿತ್ ಹಾಗೂ ಇತರ ನಾಲ್ವರಿಗೆ ಆಡಳಿತ ಸೌಧ, ಹಾಸ್ಟೆಲ್‌ಗಳು, ಲೈಬ್ರೆರಿಗಳು, ಮೆಸ್ ಹಾಗೂ ಇತರ ಸಾಮಾನ್ಯ ಪ್ರದೇಶಗಳಿಗೆ ಪ್ರವೇಶವನ್ನು ನಿಷೇಧಿಸಿತ್ತು. ಇದರ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಕಾರ್ಯ ಸಮಿತಿಯನ್ನೂ(ಜೆಎಸಿ) ರಚಿಸಿದ್ದರು.
ತನ್ನ ಮರು ದಾಖಲಾತಿಗೆ ಆಗ್ರಹಿಸಿ ರೋಹಿತ್, ವಜಾಗೊಳಿಸಲಾಗಿದ್ದ ಇತರ ನಾಲ್ವರೊಂದಿಗೆ ಕಳೆದೆರಡು ವಾರಗಳಿಂದ ಬಯಲಲ್ಲೇ ಮಲಗುತ್ತಿದ್ದರು.
ಶಿಸ್ತು ಸಮಿತಿಯ ನಿರ್ಧಾರದ ವಿರುದ್ಧ ಜೆಎಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾಗ, ರೋಹಿತ್ ಒಬ್ಬರೇ ಎನ್‌ಆರ್‌ಎಸ್ ಹಾಸ್ಟೆಲ್‌ಗೆ ಹೋಗಿ ಕೊಠಡಿಯೊಂದರೊಳಗೆ ಚಿಲಕ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು, ಅಂಬೇಡ್ಕರ್ ವಿದ್ಯಾರ್ಥಿ ಸಂಘದಲ್ಲಿ ನಾಯಕರಾಗಿದ್ದರು ಹಾಗೂ ದಲಿತರಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಹೈದರಾಬಾದ್ ವಿವಿಯ ಉಪಕುಲಪತಿ ಅಪ್ಪಾರಾವ್ ಪೊದಿಲೆಯವರನ್ನು ಟಿಒಐ ಈ ಬಗ್ಗೆ ಸಂಪರ್ಕಿಸಿದಾಗ, ಅವರು ಘಟನೆಯ ಕುರಿತು ಆಘಾತ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ ತನಗೆ ಆಘಾತ ನೀಡಿದೆ. ಈ ವಿಷಯದ ಬಗ್ಗೆ ಕೆಲವು ದಿನಗಳ ಹಿಂದೆ ತಾನು ಸಂಶೋಧನಾ ವಿದ್ಯಾರ್ಥಿಗಳಲ್ಲಿ ಮಾತನಾಡಿದ್ದೆ. ಆದರೆ, ರೋಹಿತ್ ಈ ರೀತಿ ಮಾಡಿಕೊಳ್ಳುತ್ತಾರೆಂಬ ಸುಳಿವೂ ತನಗೆ ಲಭಿಸಿರಲಿಲ್ಲವೆಂದು ಅವರು ಹೇಳಿದ್ದಾರೆ.
ಆದರೆ, ವಿದ್ಯಾರ್ಥಿಗಳು ರೋಹಿತ್‌ರ ಆತ್ಮಹತ್ಯೆಗೆ ವಿವಿಯ ಆಡಳಿತನವನ್ನೇ ದೂರಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಆಡಳಿತದ ನಿರ್ಲಕ್ಷವೇ ರೋಹಿತ್ ಈ ರೀತಿ ಮಾಡಿಕೊಳ್ಳಲು ಕಾರಣವಾಗಿದೆ. ಕನಿಷ್ಠ ಈಗಲಾದರೂ ಅದು ದಲಿತರ ಸಮಸ್ಯೆಯ ಬಗ್ಗೆ ಎಚ್ಚೆತ್ತು. ತನ್ನ ನಿರ್ಧಾರವನ್ನು ಹಿಂದೆ ಪಡೆಯುವುದೆಂದು ತಾವು ಆಶಿಸುತ್ತೇವೆ ಎಂದು ಹೈದರಾಬಾದ್ ವಿವಿಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಸಂಚಾಲಕ ಎಸ್.ಮುನ್ನಾ ಎಂಬವರು ತಿಳಿಸಿದ್ದಾರೆ.
ರೋಹಿತ್‌ರ ಆತ್ಮಹತ್ಯೆಯ ಬಳಿಕ, ವಿದ್ಯಾರ್ಥಿಗಳೀಗ ವಿವಿಯ ಆಡಳಿತ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದು, ದಲಿತ ಸಂಶೋಧನ ವಿದ್ಯಾರ್ಥಿಗಳನ್ನು ವಜಾಗೊಳಿಸುವಂತೆ ವಿವಿಯನ್ನು ಒತ್ತಾಯಿಸಿದ್ದರೆನ್ನಲಾಗಿರುವ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಬಂಡಾಯ ದತ್ತಾತ್ರೇಯರ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವ ಯೋಜನೆಯಲ್ಲಿದ್ದಾರೆ.
ಪೊಲೀಸರಿಂದ ಮೃತದೇಹ ತೆರವು
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ 12 ತಾಸುಗಳ ಬಳಿಕ, ಸೋಮವಾರ ಮುಂಜಾನೆ ವಿವಿ ಆವರಣ ಉದ್ವಿಗ್ನ ಸ್ಥಿತಿಯೊಂದಕ್ಕೆ ಸಾಕ್ಷಿಯಾಗಿದೆ.
ತಾವು ವಿವಿಯ ಆಡಳಿತ ವಿಭಾಗದ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿ, ರೋಹಿತ್‌ರ ಮೃತದೇಹವನ್ನು ಅಲ್ಲಿಗೆ ಒಯ್ದಿದ್ದೆವು. ಆಗ ಪೊಲೀಸರು ಬಂದು 15 ನಿಮಿಷಗಳೊಳಗೆ ತಾವು ಅಲ್ಲಿಂದ ಚದುರಬೇಕೆಂದರು. ತಮ್ಮ ಮೇಲೆ ಬರ್ಬರವಾಗಿ ಲಾಠಿ ಚಾರ್ಜ್ ನಡೆಸಲಾಯಿತು. ತಾವಲ್ಲಿಂದ ಚದುರಿದೊಡನೆಯೇ ಮೃತದೇಹವನ್ನು ಎಳೆದುಕೊಂಡು ಹೋದರು ಎಂದು ವಿದ್ಯಾರ್ಥಿ ನಾಯಕಿ ಅರ್ಪಿತಾ ಎಂಬವರು ‘ದಿ ನ್ಯೂಸ್ ಮಿನಿಟ್’ಗೆ ತಿಳಿಸಿದ್ದಾರೆ.
ರೋಹಿತ್‌ರ ಮೃತದೇಹವನ್ನು ಉಸ್ಮಾನಿಯಾ ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿದೆಯೆಂದು ಹೇಳಲಾಗಿದೆ.
ಅಲ್ಲಿ ಭಾರೀ ಸಂಖ್ಯೆಯ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತನ್ನ ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲು ರೋಹಿತ್‌ರ ತಾಯಿಯೂ ವಿವಿಯ ಆವರಣಕ್ಕೆ ತಲುಪಿದ್ದರೆಂದು ಅರ್ಪಿತಾ ವಿವರಿಸಿದ್ದಾರೆ.
ವಿವಿ ಆಡಳಿತವು ಇಂದು ಬಂದ್ ಘೋಷಿಸಿದೆ. ಅದು ಸದ್ಯ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದೆ. ಇದುವರೆಗೆ 8 ಮಂದಿ ವಿದ್ಯಾರ್ಥಿಗಳನ್ನೂ ಬಂಧಿಸಲಾಗಿದೆ. ಪ್ರತಿಭಟನೆ ಮುಂದುವರಿದಿದೆ.
ಕೇಂದ್ರದಿಂದ ಸತ್ಯಶೋಧನಾ ಸಮಿತಿ ರಚನೆ
ಹೊಸದಿಲ್ಲಿ: ಹೈದರಾಬಾದ್ ವಿವಿಯಲ್ಲಿ ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲರ ಆತ್ಮಹತ್ಯೆ ಪ್ರಕರಣವನ್ನು ಪರಿಶೀಲಿಸಲು ಇಬ್ಬರು ಸದಸ್ಯರ ಸತ್ಯಶೋಧನ ಸಮಿತಿಯೊಂದನ್ನು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದ ರಚಿಸಿದೆ.
ಸಚಿವಾಲಯದ ಒಎಸ್‌ಡಿ ಶಕೀಲಾ ಟಿ. ಶಂಸು ನೇತೃತ್ವದ ಸಮಿತಿಯಲ್ಲಿ ಇನ್ನೊಬ್ಬರು ಸಹಾಯಕ ಕಾರ್ಯದರ್ಶಿ ಮಟ್ಟದ ಅಧಿಕಾರಿ ಸೂರತ್ ಸಿಂಗ್ ಸದಸ್ಯರಾಗಿದ್ದಾರೆ. ಸಮಿತಿಯು ಇಂದು ಹೈದರಾಬಾರ್‌ಗೆ ತೆರಳಿ ಸಂಪೂರ್ಣ ವಿಷಯದ ಬಗ್ಗೆ ತನಿಖೆ ನಡೆಸಿ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.