ಭಕ್ತಸಾಗರ, ಬಿಗಿ ಭದ್ರತೆ ಮಧ್ಯೆ ವೈಭವಯುತ ಶೋಭಾಯಾತ್ರೆ

Update: 2016-01-18 18:36 GMT

ಪೇಜಾವರ ಸ್ವಾಮೀಜಿಯ ಐತಿಹಾಸಿಕ ಪರ್ಯಾಯ

ಉಡುಪಿ, ಜ.18: ದೇಶದ ನಾನಾ ಕಡೆಗಳಿಂದ ಹರಿದು ಬಂದ ಲಕ್ಷಾಂತರ ಮಂದಿ ಭಕ್ತಸಾಗರದ ಮಧ್ಯೆ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಐತಿಹಾಸಿಕ ಐದನೆ ಪರ್ಯಾಯ ಮಹೋತ್ಸವದ ಭವ್ಯ ಶೋಭಯಾತ್ರೆಯು ಇಂದು ಮುಂಜಾನೆ ವೈಭವಯುತವಾಗಿ ನಡೆಯಿತು. ಕಾಪು ದಂಡತೀರ್ಥ ಸರೋವರದಲ್ಲಿ ಮಿಂದು ಜೋಡುಕಟ್ಟೆಗೆ ಬೆಳಗಿವ ಜಾವ 1:45ರ ಸುಮಾರಿಗೆ ಆಗಮಿಸಿದ ಪೇಜಾವರ ಸ್ವಾಮೀಜಿಯನ್ನು ವಿವಿಧ ಗಣ್ಯರು ಬರಮಾಡಿಕೊಂಡರು. ಅಲ್ಲಿ ಪೇಜಾವರ ಸೇರಿದಂತೆ ಆರು ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಭವ್ಯ ಪರ್ಯಾಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ಕೋರ್ಟ್ ರಸ್ತೆ, ಡಯಾನ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಪ್ರವೇಶಿಸಿತು.

*Wಪೇಜಾವರ ಮಠದ ಪಟ್ಟದ ದೇವರನ್ನು ಪಲ್ಲಕ್ಕಿಯಲ್ಲಿ ಮುಂದಿರಿಸಿಕೊಂಡು ಅದಮಾರು ಹಿರಿಯ, ಪುತ್ತಿಗೆ ಸ್ವಾಮೀಜಿಗಳ ಅನುಪಸ್ಥಿತಿಯಲ್ಲಿ ಪರ್ಯಾಯ ಪೀಠವನ್ನೇರಲಿರುವ ಪೇಜಾವರ ಸ್ವಾಮೀಜಿ ಹಾಗೂ ಪಲಿಮಾರು, ಕೃಷ್ಣಾಪುರ, ಪೇಜಾವರ ಕಿರಿಯ ಶಿರೂರು, ಸೋದೆ, ಅದಮಾರು ಕಿರಿಯ ಸ್ವಾಮೀಜಿ ರಥಬೀದಿಗೆ ತಲುಪಿದರು. ಪೇಜಾವರ ಹಿರಿಯ, ಕಿರಿಯ, ಪಲಿಮಾರು, ಕೃಷ್ಣಾಪುರ ಸ್ವಾಮೀಜಿ ವಾಹನದಲ್ಲಿ ಇರಿಸಿದ್ದ ಪಲ್ಲಕ್ಕಿಯಲ್ಲಿ ಕುಳಿತು ಹಾಗೂ ಶಿರೂರು ಸ್ವಾಮೀಜಿಯು ಕಳೆದ ಬಾರಿಯಂತೆ ಪಲ್ಲಕ್ಕಿಯನ್ನು ಏರದೆ ತೆರೆದ ಅಲಂಕೃತ ವಾಹನದಲ್ಲಿ ಸಾಗಿದರು. ಸೋದೆ ಹಾಗೂ ಅದಮಾರು ಕಿರಿಯ ಸ್ವಾಮೀಜಿ ಅವರನ್ನು ಹಿಂದಿನ ಸಂಪ್ರದಾಯದಂತೆ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ತರಲಾಯಿತು.ಮನಸೆಳೆದ ಕಲಾತಂಡಗಳು: ಶೋಭಯಾತ್ರೆಯಲ್ಲಿ ಬೃಂದಾವನದಲ್ಲಿ ರಾಧಾಕೃಷ್ಣರ ವಿಹಾರ, ಅಷ್ಠಮಠದ ಯತಿಗಳಿಗೆ ಮಧ್ವರ ಬೋಧನೆ, ಗೋಪಿ ಚಂದನದಲ್ಲಿ ಶ್ರೀಕೃಷ್ಣ, ವಾದಿರಾಜ ತೀರ್ಥರ ಹಯಗ್ರೀವ ಅವತಾರ, ಶೇಷಶಯನ ಮಹಾವಿಷ್ಣು ಸೇರಿದಂತೆ ಒಟ್ಟು 10 ವಿವಿಧ ರೀತಿಯ ಸ್ತಬ್ಧಚಿತ್ರಗಳು ಗಮನ ಸೆಳೆದವು.


*Óಈ ಬಾರಿ ಆಕರ್ಷಣೀಯವಾಗಿದ್ದ ಹೊರರಾಜ್ಯದ 12 ಕಲಾ ತಂಡಗಳು ಶೋಭಾಯಾತ್ರೆಯ ಮೆರಗನ್ನು ಇನ್ನಷ್ಟು ಹೆಚ್ಚಿಸಿದವು. ಪಂಜಾಬಿನ ಭಾಂಗ್ರಾ, ಮಹಾರಾಷ್ಟ್ರದ ವಾರ್ಕರಿ, ದೋಲ್‌ತಾಶಾ, ರಂಗೋಲಿ, ಲೇಝೀಮ್, ಕೇರಳದ ಕಾವಡಿ, ಗುಜರಾತಿನ ದಾಂಡಿಯಾ, ತಿರುಪತಿಯ ಭಜನಾ ತಂಡ, ತಮಿಳುನಾಡಿನ ಕರಗ ನೃತ್ಯ, ಕೇರಳದ ಪಂಚವಾದ್ಯ, ಗೋವಾದ ಗುಮ್ಮಟೆ ನೃತ್ಯ ಭಕ್ತರ ಕಣ್ಮನ ಸೆಳೆದವು.ಚಿವರುಗಳು ಭಾಗಿ: ಪರ್ಯಾಯ ಮೆರವಣಿಗೆಯಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್, ಸದಾನಂದ ಗೌಡ, ರಾಜ್ಯದ ಸಚಿವರಾದ ಯು.ಟಿ.ಖಾದರ್, ವಿನಯ ಕುಮಾರ್ ಸೊರಕೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಭಾಗವಹಿಸಿದ್ದರು.


         
ಬಿಗಿಭದ್ರತೆ...ನೂಕುನುಗ್ಗಲು!ಪೇಜಾವರ ಶ್ರೀಗಳ ಐತಿಹಾಸಿಕ ಪರ್ಯಾಯದಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರಲಿರುವುದರಿಂದ ಇದಕ್ಕೆ ಹಲವು ತಿಂಗಳ ಹಿಂದೆಯೇ ಭದ್ರತೆ ಸಹಿತ ಇತರ ಪೂರ್ವ ತಯಾರಿಯನ್ನು ಮಾಡಲಾಗಿತ್ತು. ಆದರೂ ಜೋಡುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಮಾಡದ ಕಾರಣ ಮೆರವಣಿಗೆ ಹೊರಡುವ ವೇಳೆ ನೂಕುನುಗ್ಗಲು ಉಂಟಾಗಿ ಗಣ್ಯರ ಸಹಿತ ಎಲ್ಲರೂ ತೊಂದರೆಗೊಳಗಾದರು.
ಭದ್ರತೆಗಾಗಿ ನಗರದಾದ್ಯಂತ 1,400 ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಸ್ವಯಂಸೇವಕರು, ಸ್ಕೌಟ್ ವಿದ್ಯಾರ್ಥಿಗಳು ಕೂಡ ಭದ್ರತೆಯಲ್ಲಿ ಕೈ ಜೋಡಿಸಿದ್ದರು. ಆದರೂ ಜೋಡುಕಟ್ಟೆಗೆ ಸ್ವಾಮೀಜಿ ಆಗಮಿಸುವ ವೇಳೆ ಹಾಗೂ ಮೆರವಣಿಗೆ ಮತ್ತು ಸ್ವಾಮೀಜಿಗಳು ಪಲ್ಲಕ್ಕಿ ಏರುವ ಸಂದರ್ಭ ತಿಕ್ಕಾಟಗಳು ನಡೆದವು. ಇದರ ಮಧ್ಯೆ ಸಚಿವರುಗಳು ಸಿಕ್ಕಿ ಹಾಕಿಕೊಂಡರು. ಬಳಿಕ ಪೊಲೀಸರು ಬಲತ್ಕಾರವಾಗಿ ಜನರನ್ನು ತಳ್ಳಿ ಸಚಿವರು ಹಾಗೂ ಸ್ವಾಮೀಜಿಯವರ ಪಲ್ಲಕ್ಕಿ ಸಾಗಲು ಅನವು ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News