ರಹಸ್ಯವಾಗಿ ನಡೆದ ವೇಮುಲಾ ಅಂತ್ಯಸಂಸ್ಕಾರ
ಪೊಲೀಸರಿಂದಲೇ ನಡೆದ ಅಂತ್ಯಕ್ರಿಯೆ!
ಸ್ನೇಹಿತರು, ಕುಟುಂಬಕ್ಕೆ ಸಿಗಲಿಲ್ಲ ಪಾಲ್ಗೊಳ್ಳುವ ಅವಕಾಶ
ಹೈದರಾಬಾದ್,ಜ.19: ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾರ ಮೃತದೇಹದ ಅಂತ್ಯಸಂಸ್ಕಾರವನ್ನು ಪೊಲೀಸರು ಗುಪ್ತವಾಗಿ ಮಾಡಿ ಮುಗಿಸಿದ್ದಾರೆ. ವೇಮುಲಾ ಮೃತದೇಹದ ಅಂತ್ಯ ಸಂಸ್ಕಾರವನ್ನು ನಿರ್ದಿಷ್ಟ ಸ್ಮಶಾನಭೂಮಿಯಲ್ಲಿ ನಡೆಸಲಾಗುವುದು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಮಾಹಿತಿ ನೀಡಿದ್ದ ಪೊಲೀಸರು, ಬಳಿಕ ಅಂಬೇರ್‌ಪೇಟ್‌ನಲ್ಲಿರುವ ಇನ್ನೊಂದು ಸ್ಮಶಾನಕ್ಕೆ ಕೊಂಡೊಯ್ದ ಮೃತದೇಹಕ್ಕೆ ಅಗ್ನಿ ಸ್ಪಶರ್ ಮಾಡಿದ್ದಾರೆ. ವೇಮುಲಾರ ಸ್ನೇಹಿತರಾರೂ ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ರವಿವಾರ ಸಂಜೆ ಹಾಸ್ಟೆಲ್‌ನಲ್ಲಿ ವೇಮುಲಾರ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಮೃತದೇಹ ತೆಗೆಯದಂತೆ ಪೊಲೀಸರಲ್ಲಿ ಪಟ್ಟು ಹಿಡಿದಿದ್ದರು. ಸೋಮವಾರ ಬೆಳಗ್ಗಿನ ಜಾವ ಹಾಸ್ಟೆಲ್ ಪರಿಸರದಲ್ಲಿ ಜಮಾವಣೆಗೊಂಡ 100 ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಪೊಲೀಸರು, ಹಲವರನ್ನು ಬಂಧಿಸಿದ್ದರು. ಮೃತದೇಹವನ್ನು ರಹಸ್ಯ ಸ್ಥಳಕ್ಕೆ ಕೊಂಡೊಯ್ದು, ಅಗತ್ಯ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಪೊಲೀಸರು ಅತ್ಯಂತ ರಹಸ್ಯವಾಗಿ ಅಂತಿಮ ಸಂಸ್ಕಾರ ಮಾಡಿಮುಗಿಸಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ಸ್ಥಳೀಯ ಬಿಜೆಪಿ ನಾಯಕನ ಆಣತಿಯಂತೆ ನಡೆದಿದೆ ಎನ್ನಲಾಗಿದೆ.
ಮೃತ ರೋಹಿತ್ ಗೆಳೆಯ ಚಿತ್ತಿಬಾಬು ಪಡವಾಲಾ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನಡೆದ ಕೆಲ ವೊಂದು ಫೊಟೊಗಳನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದು, ಅವುಗಳನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದಾರೆ.
ವೇಮುಲಾ ಮೃತದೇಹವನ್ನು ಅತ್ಯಂತ ಗುಪ್ತ ಹಾಗೂ ಅವಸರದಿಂದ ವಿಲೇವಾರಿ ಮಾಡುವ ಮೂಲಕ ಅಂತಿಮ ದರ್ಶನವನ್ನು ಪಡೆಯಬೇಕೆಂಬ ಮಹದಾಸೆಯನ್ನು ಹೊಂದಿದ್ದ ನೊಂದ ವಿದ್ಯಾರ್ಥಿಗಳು, ಕುಟುಂಬ ವರ್ಗದವರು ಹಾಗೂ ಇನ್ನಿತರ ಹಿತೈಷಿಗಳ ಗಾಯಕ್ಕೆ ಬರೆ ಎಳೆಯಲಾಗಿದೆ ಕುಟುಂಬದವರು ಆರೋಪಿಸಿದ್ದಾರೆ.
ಕಾನೂನು ಹಾಗೂ ಸುವ್ಯವಸ್ಥೆಯ ಸಮಸ್ಯೆ ಬಿಗಡಾಯಿಸಬಹುದು ಎಂದು ಪೊಲೀಸರು ಹಾಗೂ ಸಂಘ ಪರಿವಾರದ ವರಿಷ್ಠರು ಭಾವಿಸಿದರೇ? ಅಥವಾ 26 ವರ್ಷದ ಪಿಎಚ್‌ಡಿ ಪದವೀಧರನಿಗೆ ಭಾರೀ ಸಂಖ್ಯೆಯ ಜನರು ಬೆಂಬಲ ಹಾಗೂ ಸಹಾನುಭೂತಿಯನ್ನು ವ್ಯಕ್ತಪಡಿಸುವುದನ್ನು ನೋಡಲು ಸಾಧ್ಯವಿಲ್ಲ ಎಂದು ತಿಳಿದು ಅವರು ಈ ರೀತಿ ಮಾಡಿದರೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ರೋಹಿತ್ ಗೆಳೆಯ ಪ್ರಶ್ನಿಸಿದ್ದಾರೆ.