ದಲಿತ ಸಂಶೋಧಕನ ಆತ್ಮಹತ್ಯೆ: ಸಚಿವೆ ಸ್ಮತಿ ಇರಾನಿಯಿಂದ ವಿಶ್ವ ವಿದ್ಯಾನಿಲಯಕ್ಕೆ ಒತ್ತಡ?
ಹೊಸದಿಲ್ಲಿ, ಜ.19: ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ದಲಿತ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಎಂಬವರ ಆತ್ಮಹತ್ಯಾ ಪ್ರಕರಣದಲ್ಲಿ ಮಾನವ ಸಂಪನ್ಮೂಲ ಸಚಿವಾಲಯದ ಪಾತ್ರವು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಕಾರ್ಮಿಕ ಖಾತೆಯ ಸಹಾಯಕ ಸಚಿವ ಬಂಡಾರು ದತ್ತಾತ್ರೇಯ ಪತ್ರವನ್ನು ಮುಂದಿಟ್ಟುಕೊಂಡು ಮಾನವ ಸಂಪನ್ಮೂಲ ಸಚಿವಾಲಯವೂ ವಿಶ್ವವಿದ್ಯಾನಿಲಯಕ್ಕೆ ವಿವರವನ್ನು ಕೇಳಿರುವುದು ಇದೀಗ ಸ್ಪಷ್ಟವಾಗಿದೆ.
ಕಾರ್ಮಿಕ ಖಾತೆಯ ಸಹಾಯಕ ಸಚಿವ ಬಂಡಾರು ದತ್ತಾತ್ರೇಯ ಸಹಿ ಮಾಡಿದ್ದ ಟಿಪ್ಪಣಿ ಯೊಂದು ತಲುಪಿದ ಬಳಿಕ ಮಾನವ ಸಂಪನ್ಮೂಲ ಸಚಿವಾಲಯವೂ ವಿಶ್ವವಿದ್ಯಾನಿಲಯಕ್ಕೆ ಈ ಪತ್ರವನ್ನು ಬರೆದಿತ್ತು.
ಟಿಪ್ಪಣಿಯಲ್ಲಿ ಬಂಡಾರು, ಕೆಲವು ವಿಚಾರಗಳನ್ನೆತ್ತಿದ್ದರು ಹಾಗೂ 2015ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದಿದ್ದ ಕೆಲವು ಘರ್ಷಣೆಗಳ ಬಗ್ಗೆ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯಕ್ಕೆ ಮಾಹಿತಿ ನೀಡಿದ್ದರೆಂಬುದನ್ನು ಬಹಿರಂಗಪಡಿಸಿದೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಸಚಿವಾಲಯವು ಮೊದಲು ಬರೆದಿದ್ದ ಪತ್ರದಲ್ಲಿ ವಿವರಗಳನ್ನು ಕೋರಿದ್ದು, ಬಂಡಾರು ಬರೆದಿದ್ದ ಪತ್ರವನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಎರಡನೆಯ ಪತ್ರದಲ್ಲಿ ಅದು ಯಾವುದೇ ಮಾಹಿತಿ ಅಥವಾ ಹೇಳಿಕೆಗಳು ತನಗೆ ತಲುಪಿಲ್ಲವೆಂದು ವಿವಿಯ ರಿಜಿಸ್ಟ್ರರ್‌ಗೆ ಜ್ಞಾಪಿಸಿತ್ತು ಹಾಗೂ ಬಂಡಾರು ದತ್ತಾತ್ರೇಯರಿಗೆ ಉತ್ತರ ಕಳುಹಿಸಲು ಸಾಧ್ಯವಾಗುವಂತೆ ಈ ವಿಷಯವನ್ನು ತ್ವರಿತಗೊಳಿಸುವಂತೆ ವಿವಿಗೆ ಮನವಿ ಮಾಡಿತ್ತು.
ಹೈದರಾಬಾದ್ ವಿವಿಯಲ್ಲಿ ಆಗ ಎಬಿವಿಪಿ ಅಧ್ಯಕ್ಷರಾಗಿದ್ದ ಸುಶೀಲ್ ಕುಮಾರ್ ಎಂಬವರ ಮೇಲೆ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿದೆಯೆನ್ನಲಾದ ಬಳಿಕ ಹೈದರಾಬಾದ್‌ನಲ್ಲಿ ಕೆಲವು ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು.
ರೋಹಿತ್‌ರ ಆತ್ಮಹತ್ಯೆಗೆ ಸಂಬಂಧಿಸಿ ಬಂಡಾರು ದತ್ತಾತ್ರೇಯ ಹಾಗೂ ವಿವಿಯ ಉಪಕುಲಪತಿಯ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ.
ಸಚಿವ ಬಂಡಾರು ದತ್ತಾತ್ರೇಯರ ಒತ್ತಾಸೆಯಂತೆ ದಲಿತ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯವು ರೋಹಿತ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ. ದಲಿತ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮತಿ ಇರಾನಿಯವರಿಗೆ ಪತ್ರ ಬರೆದಿದ್ದರೆಂಬ ಆರೋಪದೊಂದಿಗೆ ಈ ಪ್ರಕರಣವೀಗ ರಾಜಕೀಯ ತಿರುವು ಪಡೆದಿದೆ.