ಗಣರಾಜ್ಯೋತ್ಸವ ಭದ್ರತೆಗೆ ಸಿಐಎ ಸಹಕಾರ
ಹೊಸದಿಲ್ಲಿ, ಜ.19: ಪ್ರಜಾಪ್ರಭುತ್ವ ದಿನಾಚರಣೆಯ ಅಭ್ಯಾಗತರಾಗಿ ಭಾರತಕ್ಕೆ ಭೇಟಿ ನೀಡಲಿರುವ ಫ್ರಾನ್ಸ್‌ನ ಅಧ್ಯಕ್ಷ ಫ್ರಾಂಕೋಯ್ಸಾ ಹೊಲಾಂಡ್‌ರ ಭದ್ರತಾ ವ್ಯವಸ್ಥೆ ಈ ಬಾರಿ ಕೇವಲ ಔಪಚಾರಿಕತೆಗಷ್ಟೇ ಸೀಮಿತವಾಗಿರುವುದಿಲ್ಲ. ಪ್ಯಾರಿಸ್ ಹಾಗೂ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಗಳ ಬಳಿಕ ತೀವ್ರ ಬೆದರಿಕೆಯನ್ನು ಅಂದಾಜಿಸಲಾಗಿದ್ದು, ಜ.26ರಂದು ವೇದಿಕೆ ಹಂಚಿಕೊಳ್ಳಲಿರುವ ಹೊಲಾಂಡ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ಒದಗಿಸಲು ಭಾರತೀಯ ಗುಪ್ತಚರ ಸಂಸ್ಥೆಗಳು ಹಾಗೂ ಫ್ರಾನ್ಸ್‌ನ ಬಾಹ್ಯ ಭದ್ರತೆಯ ಮಹಾನಿರ್ದೇಶನಾಲಯಗಳಿಗೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಸಹಕಾರ ನೀಡಲಿದೆಯೆಂದು ಉನ್ನತ ಮೂಲಗಳು ಟಿಐಒಗೆ ತಿಳಿಸಿವೆ.
ಡಿಜಿಎಸ್‌ಇ ಹಾಗೂ ಭಾರತೀಯ ಗುಪ್ತಚರ ಸಂಸ್ಥೆಗಳು ಸಿಐಎಯೊಂದಿಗೆ ಈ ಹಿಂದೆಯೂ ನಿಕಟವಾಗಿ ಕೆಲಸ ಮಾಡಿವೆ. ಅಂತಿಮ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹಾಗೂ ಗುಪ್ತ ಮಾಹಿತಿ ಹಂಚಿಕೊಳ್ಳಲು ಮೂರೂ ದೇಶಗಳ ಪರಿಣತರು ಪರಸ್ಪರ ಸಂಪರ್ಕದಲ್ಲಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಹಾಗೂ ಅಲ್-ಖಾಯಿದಾಗಳಂತಹ ದೊಡ್ಡ ಭಯೋತ್ಪಾದಕ ಸಂಘಟನೆಗಳ ಕಣ್ಣು ಗಣರಾಜ್ಯೋತ್ಸವದ ಮೇಲೆ ಬಿದ್ದಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ನುಸಿ ಕೂಡ ನುಸುಳದಷ್ಟು ಪಕಡ್ಬಂಬಿ ಭದ್ರತೆ ಅಗತ್ಯವೆಂದು ಅಭಿಪ್ರಾಯಿಸಲಾಗಿದೆ. ಐಸಿಸ್, ಫ್ರಾನ್ಸ್‌ಗೆ ಬಹಿರಂಗ ಬೆದರಿಕೆಗಳನ್ನು ಹಾಕುತ್ತಿದ್ದರೆ, ಅಲ್ ಖಾಯಿದಾ ಹಾಗೂ ಅದರ ಭಾರತೀಯ ವಿಭಾಗಗಳು ತಮ್ಮ ಸಂದೇಶಗಳಲ್ಲಿ ಮೋದಿಯವರನ್ನು ಅನೇಕ ಬಾರಿ ಉಲ್ಲೇಖಿಸಿವೆ.
ಐಸಿಸ್‌ಗೆ ಭಾರತದಲ್ಲಿ ವಿಶಾಲ ನೆಲೆ ಇಲ್ಲವಾದರೂ, ಇಂಡಿಯನ್ ಮುಜಾಹಿದೀನ್ ಬಂಡುಕೋರರಿಂದ ಸ್ಥಾಪಿಸಲ್ಪಟ್ಟಿರುವ ಎಯುಟಿಯೊಂದಿಗೆ ಅದಕ್ಕೆ ಸಂಪರ್ಕವಿದೆ. ಎಯುಟಿ, ದಾಳಿ ನಡೆಸಲು ಮೂಲ ಸೌಕರ್ಯ ಹಾಗೂ ಸಾಗಾಟ ವ್ಯವಸ್ಥೆಯ ಏರ್ಪಾಡು ಮಾಡಬಹುದು. ಆದರೆ, ಅಲ್-ಖಾಯ್ದ ಸುತ್ತಲೂ ಬೆದರಿಕೆಯಾಗಿದೆ. ಇತ್ತೀಚೆಗೆ ಗುಪ್ತಚರ ಸಂಸ್ಥೆಗಳು ಹಾಗೂ ದಿಲ್ಲಿ ಪೊಲೀಸರ ವಿಶೇಷ ಘಟಕ ಅಲ್‌ಖಾಯಿದಾದ ಭಾರತೀಯ ಘಟಕವಾಗಿರುವ ಎಕ್ಯೂಐಎಸ್‌ನ ಜಾಲವೊಂದನ್ನು ಭೇದಿಸಿದ್ದವು ಹಾಗೂ ಅದರ ನೇಮಕಾತಿ ಮತ್ತು ತರಬೇತಿ ಮುಖ್ಯಸ್ಥ ಸಹಿತ ಐವರನ್ನು ಬಂಧಿಸಿದ್ದವು. ಎಕ್ಯೂಐಎಸ್ ಮುಖ್ಯಸ್ಥ ಸನಾವುಲ್ ಹಕ್ ಅಲಿಯಾಸ್ ವೌಲಾನಾ ಅಸೀಂ ಉಮರ್ ಉತ್ತರಪ್ರದೇಶದ ಸಂಭಾಲ್‌ನಲ್ಲಿ ಮೂಲ ಹೊಂದಿದ್ದಾನೆ.
ಮೋದಿ ಹಾಗೂ ಹೊಲಾಂಡ್ ಇಬ್ಬರೂ ಐಸಿಸ್ ಹಾಗೂ ಅಲ್-ಖಾಯಿದಾಗಳ ಪ್ರಮುಖ ಗುರಿಗಳಾಗಿದ್ದು, ಲಷ್ಕರ್ ತಯ್ಯಬಾ, ಜೆಶೆ-ಮುಹಮ್ಮದ್, ಅನ್ಸಾರುಲ್ ತೌಹೀಸ್ ಫಿ ಬಿಲಾದ್ ಅಲ್ ಹಿಂದ್‌ಗಳಂತಹ ಉಗ್ರ ಸಂಘಟನೆಗಳು ಅವುಗಳಿಗೆ ಸಹಾಯ ನೀಡಬಹುದು.
ಕೇಂದ್ರ ದಿಲ್ಲಿಯಲ್ಲಿ ಅರೆ ಸೇನಾ ಪಡೆಯ 150 ಕಂಪೆನಿಗಳು(15 ಸಾವಿರ ಯೋಧರು) ಪ್ರಮುಖ ಕಟ್ಟಡಗಳ ಮೇಲಿಂದ ಕಣ್ಗಾವಲು ನಡೆಸಲಿವೆ. ರಾಜಪಥವು ವಿಮಾನ ಹಾರಾಟ ನಿಷೇಧ ವಲಯವಾಗಿದ್ದು, ನೆಲದಿಂದಾಗಲಿ, ಆಕಾಶದಿಂದಾಗಲಿ, ಮೋದಿ ಹಾಗೂ ಹೊಲಾಂಡ್‌ರತ್ತ ಯಾವುದೇ ವಸ್ತುವಿಗೂ ಹೋಗಲವಕಾಶವಿಲ್ಲ.