ವಿರಾರ್‌ನ 100 ಮಂದಿಯ ಕುಟುಂಬದಿಂದ ಅಂಗಾಂಗ ದಾನ ಪ್ರತಿಜ್ಞೆ
ಮುಂಬೈ, ಜ.19: ಬಾಪ್ಟಿಸ್ಟಾಲೊಪೇಝ್ ಎಂಬವರು 82ರ ಹರೆಯದ ವಿರಾರ್ ನಿವಾಸಿ ಅವರ ಕುಟುಂಬದಲ್ಲಿ 100ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಲೊಪೆಝ್‌ರ ನೇತೃತ್ವದಲ್ಲಿ ಅವರೆಲ್ಲ ತಮ್ಮ ಮರಣಾ ನಂತರ ಅಂಗಾಂಗಗಳು ಹಾಗೂ ಶರೀರವನ್ನು ದಾನ ನೀಡುವ ಪ್ರತಿಜ್ಞೆ ಕೈಗೊಂಡು ಸಹಿ ಹಾಕಿದ್ದಾರೆ.
ಲೊಪೆಝ್ ಹಾಗೂ ಅವರ ಮಗ ಇಲಿಯಾಸ್(60) ತಮ್ಮ ಮೃತ ದೇಹಗಳನ್ನು ದಫನ ಮಾಡುವುದಕ್ಕಿಂತ ದಾನ ಮಾಡುವುದನ್ನು ಇಚ್ಛಿಸಿದ್ದರೆ, ಅವರ, ವಿಸ್ತೃತ ಕುಟುಂಬದ ಸದಸ್ಯರು ಸದ್ಯ ತಮ್ಮ ಅಂಗಾಂಗಗಳು ಹಾಗೂ ಜೀವಕೋಶಗಳನ್ನು ದಾನ ಮಾಡಲು ಸಿದ್ಧರಾಗಿದ್ದಾರೆ.
ತಂದೆ-ಮಗ ಮಾತ್ರವಲ್ಲದೆ ಕುಟುಂಬದ ಇತರ 4-5 ಸದಸ್ಯರೂ ಶರೀರ ದಾನದ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ. ಇತರ 60 ಮಂದಿ ಅಂಗಾಂಗ ಹಾಗೂ ಜೀವಕೋಶಗಳ ದಾನಕ್ಕೆ ಮುಂದಾಗಿದ್ದಾರೆ. ಕುಟುಂಬದ 12 ಮಕ್ಕಳೂ ಹೆತ್ತವರ ಒಪ್ಪಿಗೆಯ ಬಳಿಕ ಅಂಗಾಂಗ ದಾನಕ್ಕೆ ಸಿದ್ಧರಾಗಿದ್ದಾರೆ. ಕುಟುಂಬದ ವಿವಾಹಿತ ಹೆಣ್ಣುಮಕ್ಕಳು ಹಾಗೂ ಅಳಿಯಂದಿರನ್ನೂ ಅಂಗಾಂಗ ದಾನದ ಸಂದೇಶದೊಂದಿಗೆ ಭೇಟಿ ಮಾಡಲಾಗುತ್ತಿದೆ.
ಅಂಗಾಂಗ ದಾನದ ಕುರಿತಾದ ಕೆಲವು ಭಾಷಣಗಳಿಗೆ ಹಾಜರಾಗಿದ್ದ ಇಲಿಯಾಸ್, ಜ.10ರಂದು ತನ್ನ ಅಜ್ಜನ 25ನೆ ಪುಣ್ಯ ತಿಥಿಯಂದು ಈ ಬಗ್ಗೆ ಭಾಷಣ ಮಾಡಲು ತನ್ನ ಅಗಾಶಿ ಹೋಂಗೆ ಕರೆಸಿದ್ದನು. ಅಲ್ಲಿ ಆತ ಹಾಗೂ ಮೂವರು ಸಹೋದರರ ಕುಟುಂಬಗಳು ವಾಸಿಸುತ್ತಿವೆ.
ತಾವು ಸುಮಾರು 80 ಮಂದಿ ಇದ್ದೆವು. ದೇಹ ಮುಕ್ತಿ ಮಿಶನ್ ನಡೆಸುತ್ತಿರುವ ಬಾಪು ಸಾಹೇಬ್ ಪಾಟೀಲ್-ಪವಾರ್ ದತ್ತಿ ಸಂಸ್ಥೆಯ ವಿಶ್ವಸ್ತ ಪುರುಷೋತ್ತಮ ಪವಾರ್-ಪಾಟೀಲ್ ಎಂಬವರು ಅಂಗಾಂಗ ದಾನದ ಬಗ್ಗೆ ಮಾತನಾಡಿದ್ದರು. ಅಂಗಾಂಗ ದಾನವು ಮಾನವ ಕುಲಕ್ಕೆ ಮರಣಾನಂತರವೂ ಮಾಡಬಹುದಾದ ಅತ್ಯುತ್ತಮ ಸೇವೆಯೆಂದು ತಾವು ಭಾಷಣದ ಬಳಿಕ ಅಭಿಪ್ರಾಯಿಸಿದೆವು.
ತನ್ನ ತಂದೆ ಪ್ರತಿಜ್ಞೆಗೆ ಮೊದಲು ಸಹಿ ಹಾಕಿದವರು. ಅದೊಂದು ಉದಾರ ಹಾಗೂ ಬೆಲೆಯುಳ್ಳ ಜೀವರಕ್ಷಕ ನಿರ್ಧಾರವೆಂದು ಅವರು ಭಾವಿಸಿದರು ಎಂದು ವಿವರಿಸಿದ ಇಲಿಯಾಸ್, ಅಂಗಾಂಗ ದಾನಕ್ಕೆ ಜನರ ಮನವೊಲಿಸುವುದು ಸುಲಭ. ಆದರೆ, ಸಂಪೂರ್ಣ ಶರೀರ ದಾನಕ್ಕೆ ಮನವೊಲಿಸುವುದಕ್ಕೆ ಭಾರೀ ಪ್ರಯತ್ನ ನಡೆಸಬೇಕಾಗುತ್ತದೆಂದು ಅಭಿಪ್ರಾಯಿಸಿದ್ದಾರೆ.
ಕುಟುಂಬವೀಗ ಇತರ ಗ್ರಾಮಸ್ಥರನ್ನೂ ಅಂಗಾಂಗ ದಾನಕ್ಕೆ ಪ್ರೇರೇಪಿಸುತ್ತಿದೆ. ಶ್ರೀಲಂಕಾಕ್ಕೆ ಪ್ರಪಂಚಕ್ಕೆಲ್ಲ ಕಣ್ಣುಗಳನ್ನು ದಾನ ಮಾಡಲು ಸಾಧ್ಯವಾದರೆ, ಭಾರೀ ಜನಸಂಖ್ಯೆಯ ಭಾರತವೇಕೆ ತನ್ನದೇ ಜನರಿಗೆ ನೆರವಾಗಬಾರದು? ಎಂದು ಅಂಗಾಂಗ ದಾನದ ಪ್ರತಿಜ್ಞೆ ಕೈಗೊಂಡಿರುವ ಲೊಫೇಝ್ ಕುಟುಂಬದ ಸಂಬಂಧಿ ಅಶ್ಮಿತಾ ಕೊರೆಯಾ ಎಂಬವರು ಬೆಟ್ಟು ಮಾಡಿದ್ದಾರೆ.