ಮುಝಫ್ಫರ್‌ನಗರ ಕೋಮುಗಲಭೆ: ನ್ಯಾಯಾಲಯಕ್ಕೆ ಶರಣಾದ ಬಿಜೆಪಿ ಶಾಸಕ ಸಂಗೀತ್

Update: 2016-01-19 18:27 GMT

ಮುಝಫ್ಫರ್‌ನಗರ್,ಜ.19: ಉತ್ತರಪ್ರದೇಶದ ಮುಝಫ್ಫರ್‌ನಗರ್‌ನಲ್ಲಿ 2013ರಲ್ಲಿ ನಡೆದ ಭೀಕರ ಕೋಮುಗಲಭೆ ಪ್ರಕರಣದ ಆರೋಪಿ, ಬಿಜೆಪಿ ಶಾಸಕ ಸಂಗೀತ್ ಸೋಮ್ ಮಂಗಳವಾರ ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾಗತರಾಗಿದ್ದಾರೆ. ಸೋಮ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.


  ಸೋಮ್‌ರಿಂದ 20 ಸಾವಿರ ರೂ.ಬಾಂಡ್ ಹಾಗೂ ಮುಂದಿನ ಆಲಿಕೆಗೆ ನ್ಯಾಯಾಲಯದಲ್ಲಿ ಹಾಜರಾಗಬೇಕೆಂಬ ಮುಚ್ಚಳಿಕೆಯನ್ನು ಪಡೆದುಕೊಂಡ ಬಳಿಕ ಅವರಿಗೆ ಹೆಚ್ಚುವರಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸೀತಾರಾಮ್ ಜಾಮೀನು ಬಿಡುಗಡೆ ನೀಡಿದರು.
 
 ಪ್ರಕರಣದ ಮುಂದಿನ ಆಲಿಕೆಯನ್ನು ಜನವರಿ 23ಕ್ಕೆ ನಿಗದಿಪಡಿಸಲಾಗಿದೆ. ಮುಝಫ್ಫರ್ ಕೋಮು ಗಲಭೆಯ ಸಂದರ್ಭದಲ್ಲಿ ನಿಷೇಧಾಜ್ಞೆ ಉಲ್ಲಂಘನೆ,ಸರಕಾರಿ ನೌಕರರಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದಕ್ಕಾಗಿ ಸೋಮ್ ಹಾಗೂ ಇತರ ಆರು ಮಂದಿ ಆರೋಪಿಗಳು, ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ.ಮುಝಫ್ಫರ್ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ, ಪ್ರಕರಣದ ಇತರ ಆರೋಪಿಗಳಾದ ಕೇಂದ್ರ ಸಚಿವ ಸಂಜೀವ್ ಬಾಲಿಯಾನ್, ಬಿಜೆಪಿ ಶಾಸಕರಾದ ಸುರೇಶ್ ರಾಣಾ,ಭರತೇಂದು ಸಿಂಗ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದರು.


ಆರೋಪಿಗಳು ಮುಝಫ್ಫರ್ ಜಿಲ್ಲೆಯ ನಡಾಲಾ ಮಡೊರ್ ಮಹಾಪಂಚಾಯತ್ ಸಭೆಯಲ್ಲಿ ಪಾಲ್ಗೊಂಡು, ಪ್ರಚೋದನಕಾರಿ ಭಾಷಣಗಳ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದರೆಂದು ಪ್ರಾಸಿಕ್ಯೂಶನ್ ಆಪಾದಿಸಿದೆ.


 ಪ್ರಕರಣದ ಇನ್ನೋರ್ವ ಆರೋಪಿ, ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಜಾಮೀನುಯೋಗ್ಯ ವಾರಂಟ್ ಎದುರಿಸುತ್ತಿದ್ದಾರೆ. 2013ರ ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಮುಝಫ್ಫರ್‌ನಗರ್ ಜಿಲ್ಲೆಯಲ್ಲಿ ನಡೆದ ಭೀಕರ ಕೋಮುಗಲಭೆಯಲ್ಲಿ 60 ಮಂದಿ ಮೃತಪಟ್ಟು, 40 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News