ಅಂಡರ್-19 ಕ್ರಿಕೆಟ್ ವಿಶ್ವಕಪ್: ಭಾರತಕ್ಕೆ ಐರ್ಲೆಂಡ್ ಮೊದಲ ಎದುರಾಳಿ
ಢಾಕಾ, ಜ.20: ಬಾಂಗ್ಲಾದೇಶದಲ್ಲಿ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಭಾರತ ತಂಡ ಐರ್ಲೆಂಡ್ ತಂಡವನ್ನು ಎದುರಿಸುವುದರೊಂದಿಗೆ ಅಭಿಯಾನ ಆರಂಭಿಸಲಿದೆ.
ಅಂಡರ್-19 ಕ್ರಿಕೆಟ್ ವಿಶ್ವಕಪ್ ಜ.27 ರಿಂದ ಫೆ.14ರ ತನಕ ನಡೆಯಲಿದೆ. ಡಿ ಗುಂಪಿನಲ್ಲಿರುವ ಭಾರತ ಹಾಗೂ ನ್ಯೂಝಿಲೆಂಡ್ ಅಗ್ರ ಎರಡು ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ನೇಪಾಳ ಹಾಗೂ ಐರ್ಲೆಂಡ್ ತಂಡಗಳು ಡಿ ಗುಂಪಿನಲ್ಲಿರುವ ಇನ್ನೆರಡು ತಂಡಗಳಾಗಿವೆ.
16 ದೇಶಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ 9 ಟೆಸ್ಟ್ ಆಡುವ ದೇಶಗಳು ಹಾಗು ಏಳು ಅಸೋಸಿಯೇಟ್ ಹಾಗೂ ಮಾನ್ಯತೆ ಪಡೆದ ಸದಸ್ಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಕೆನಡಾ, ಫಿಜಿ, ನಮೀಬಿಯಾ, ನೇಪಾಳ, ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ತಂಡಗಳಿವೆ.
ತಂಡಗಳನ್ನು 4 ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ ಲೀಗ್ ಕ್ವಾರ್ಟರ್‌ಫೈನಲ್‌ಗೆ ತಲುಪಲಿವೆ. ಇತರ 2 ತಂಡಗಳು ಪ್ಲೇಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿವೆ.
2000, 2008 ಹಾಗೂ 2012ರಲ್ಲಿ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ ಈ ಬಾರಿ ಬ್ಯಾಟಿಂಗ್ ಗ್ರೇಟ್ ರಾಹುಲ್ ದ್ರಾವಿಡ್ ಕೋಚ್ ನೀಡಲಿದ್ದಾರೆ. 2 ವರ್ಷಗಳ ಹಿಂದೆ ಯುಎಇನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾಗಿತ್ತು.
ಡಿ ಗುಂಪಿನಲ್ಲಿ ಭಾರತದ ಪಂದ್ಯಗಳು:
ಜ.28: ಐರ್ಲೆಂಡ್, ಜ.30: ನ್ಯೂಝಿಲೆಂಡ್, ಫೆ.1: ನೇಪಾಳ.