×
Ad

ರೋಹಿತ್ ಸಾಮಾನ್ಯ ಅರ್ಹತೆಯಲ್ಲಿ ಪ್ರವೇಶ ಪಡೆದಿದ್ದರು

Update: 2016-01-20 23:57 IST

ಮೀಸಲಾತಿಯಿಂದಲ್ಲ   ದಲಿತ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ

ಹೈದರಾಬಾದ್, ಜ.20: ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸಾಮಾನ್ಯ ಅರ್ಹತಾ ಕೋಟಾದಲ್ಲಿ ಪ್ರವೇಶ ಪಡೆದಿದ್ದರು. ಆದಾಗ್ಯೂ, ಅವರು ಪ್ರವೇಶಾತಿ ಅರ್ಜಿಯಲ್ಲಿ ಪರಿಶಿಷ್ಟ ಜಾತಿ ಎಂದು ಘೋಷಿಸಿಕೊಂಡಿದ್ದರು.

ರೋಹಿತ್, ಅಗತ್ಯವೆಂದು ಭಾವಿಸದ ಕಾರಣ ತಾನು ಎಸ್ಸಿ ಎಂಬುದಕ್ಕೆ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ. ಅವರು ಅರ್ಹತೆಯ ಆಧಾರದಲ್ಲಿ ಪ್ರವೇಶ ಪಡೆದಿರುವುದರಿಂದ ತನ್ನ ಎಸ್ಸಿ ಸ್ಥಾನಮಾನವನ್ನು ಸಾಬೀತುಪಡಿಸುವ ಅಗತ್ಯ ರೋಹಿತ್‌ಗಿರಲಿಲ್ಲವೆಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ರೋಹಿತ್‌ರ ಚಿಕ್ಕಪ್ಪ ಒಬ್ಬರು ನೀಡಿದ ಹೇಳಿಕೆಯೊಂದು ಗೊಂದಲ ಸೃಷ್ಟಿಸಿತ್ತು. ರೋಹಿತ್‌ರ ಅಂತ್ಯ ಸಂಸ್ಕಾರಕ್ಕೆ ಮೊದಲು, ಅವರು ಯಾವ ಸಮುದಾಯಕ್ಕೆ ಸೇರಿದವರೆಂದು ತಾವು ತಿಳಿಯ ಬಯಸಿದೆವು. ರೋಹಿತ್‌ರ ತಂದೆ ‘ವಡ್ಡೆರ’ ಸಮುದಾಯದವರಾಗಿದ್ದಾರೆ ತಮಗೆ ತಿಳಿಸಲಾಯಿತು. ಈ ಸಮುದಾಯವು ದಕ್ಷಿಣ ಭಾರತಾದ್ಯಂತ ಹರಡಿರುವ ಒಂದು ಕಲ್ಲು ಕುಟಿಗರ ಸಮುದಾಯವಾಗಿದೆ. ಆದರೆ, ಆಂದ್ರಪ್ರದೇಶದಲ್ಲಿ ಈ ಸಮುದಾಯವನ್ನು ಹಿಂದುಳಿದ ಜಾತಿಗಳ ಪ್ರವರ್ಗಕ್ಕೆ ಸೇರಿಸಲಾಗಿದೆಯೇ ಹೊರತು ಪರಿಶಿಷ್ಟ ಜಾತಿಗಳಿಗಿಲ್ಲ. ರೋಹಿತ್ ಆಂಧ್ರಪ್ರದೇಶದ ಗುಂಟೂರಿನವರೆಂದು ಅವರ ಅಂತ್ಯಕ್ರಿಯೆಗೆ ಮೊದಲು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆದಾಗ್ಯೂ, ಅವರಿಂದ ರೋಹಿತ್‌ರ ಚಿಕ್ಕಪ್ಪನ ಹೆಸರು ತಿಳಿಯಲು ಸಾಧ್ಯವಾಗಲಿಲ್ಲ. ತಾನು ಪರಿಶಿಷ್ಟ ಜಾತಿಗೆ ಸೇರಿದವಳೆಂದು ರೋಹಿತ್‌ರ ತಾಯಿ ಸ್ಪಷ್ಟಪಡಿಸಿದುದು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿತು. ಅವರು ವ್ಯಾಕುಲಗೊಂಡಿದ್ದರು. ಆಕೆ ನಿಜವಾಗಿಯೂ ಎಸ್ಸಿಗೆ ಸೇರಿದವಳೆಂಬುದನ್ನು ಸಾಬೀತುಪಡಿಸುವ ದಾಖಲೆ ಕೇಳುವುದಕ್ಕೆ ಸಾಧ್ಯವಿರಲಿಲ್ಲವೆಂದು ಅಧಿಕಾರಿ ತಿಳಿಸಿದ್ದಾರೆ.
ರೋಹಿತ್‌ರ ತಂದೆ ಬಹಳ ಹಿಂದೆಯೇ ಕುಟುಂಬವನ್ನು ತ್ಯಜಿಸಿದ್ದರು. ಮಗನನ್ನು ತಾಯಿಯೇ ಸಾಕಿದ್ದರು. ಕಾನೂನಿನ ಪ್ರಕಾರ, ಕನಿಷ್ಠ ಮೀಸಲಾತಿಯ ಉದ್ದೇಶಕ್ಕಾದರೂ, ಎಸ್ಸಿ ತಾಯಿಯೊಬ್ಬಳ ಮಗನನ್ನು ಎಸ್ಸಿ ಎಂದೇ ಪರಿಗಣಿಸಬೇಕು. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಉಪಕುಲಪತಿಯ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯನ್ವಯ ಆರೋಪ ಹೊರಿಸಬಹುದೇ ಎಂದು ಪೊಲೀಸರು ವೌಲ್ಯಮಾಪನ ನಡೆಸಬೇಕಾಗುತ್ತದೆ.
ರೋಹಿತ್‌ರ ಜಾತಿಯನ್ನು ನಿರ್ಧರಿಸಲು ತಾವು ಅವರ ತಾಲೂಕಿನ ತಹಶೀಲ್ದಾರರಿಂದ ಅವರ ತಾಯಿಯ ದಾಖಲೆಗಳನ್ನು ಪಡೆದು ತನಿಖೆ ನಡೆಸಬೇಕಾಗುತ್ತದೆಯೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News