ಸೌರವ್ಯೆಹದಲ್ಲಿ ನಿಗೂಢ 9ನೆ ಗ್ರಹ?
ಲಂಡನ್, ಜ. 21: ಈವರೆಗೆ ಗೋಚರಿಸದ ಬೃಹತ್ ಗ್ರಹವೊಂದು ನಮ್ಮ ಸೌರವ್ಯೆಹದ ಅಂಚಿನಲ್ಲಿ ಇರುವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಮಾತನಾಡಿದ್ದಾರೆ. ಭೂಮಿಗಿಂತ 10 ಪಟ್ಟು ದ್ರವ್ಯರಾಶಿ ಹೊಂದಿರುವ ಹೊಸ ಗ್ರಹವು ನಮ್ಮ ಸೌರ ವ್ಯೆಹದ ಒಂಬತ್ತನೆ ಗ್ರಹವಾಗುವಷ್ಟು ದೊಡ್ಡ ಗಾತ್ರವನ್ನು ಹೊಂದಿದೆ.
ಆದರೆ, ವಿಜ್ಞಾನಿಗಳು ಈ ಗ್ರಹವನ್ನು ಈವರೆಗೆ ನೋಡಿಲ್ಲ. ಬದಲಿಗೆ ಸೌರವ್ಯೆಹದ ಹೊರ ವಲಯದಲ್ಲಿರುವ ಕುಬ್ಜ ಗ್ರಹಗಳು ಮತ್ತು ಇತರ ಆಕಾಶಕಾಯಗಳು ಚಲಿಸುತ್ತಿರುವ ರೀತಿಯನ್ನು ಗಮನಿಸಿ ಈ ಗ್ರಹದ ಇರುವಿಕೆಯ ಬಗ್ಗೆ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುಬ್ಜ ಗ್ರಹಗಳು ಮತ್ತು ಆಕಾಶ ಕಾಯಗಳ ಪಥಗಳು ಬೃಹತ್, ಆದರೆ ಅಗೋಚರ ಕಾಯವೊಂದರಿಂದ ಅಡಚಣೆಗೊಳಗಾಗುವುದನ್ನು ವಿಜ್ಞಾನಿಗಳು ಕಂಡುಕೊಂಡರು.
‘‘ಸೌರ ವ್ಯೆಹದಲ್ಲಿ ಇನ್ನೊಂದು ಗ್ರಹ ಇರುವುದಾದರೆ, ಅದು ಇದೇ ಎಂದು ನನಗನಿಸುತ್ತದೆ’’ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಗ್ರೆಗ್ ಲಾಫ್ಲಿನ್ ‘ನ್ಯಾಶನಲ್ ಜಿಯಾಗ್ರಫಿಕ್’ಗೆ ತಿಳಿಸಿದರು. ‘‘ಇನ್ನೊಂದು ಗ್ರಹವನ್ನು ನಾವು ಹೊಂದಿದರೆ, ಅದು ಅಚ್ಚರಿಯ ಸಂಗತಿಯೇ ಸರಿ. ಅಂಥ ಒಂದು ಗ್ರಹ ಇದೆ ಎಂಬುದಾಗಿ ಆಶಿಸೋಣ’’ ಎಂದರು.
ಈ ಗ್ರಹ ಇದೆಯೆಂದಾದರೆ, ಅದು ಭೂಮಿಯ 10 ಪಟ್ಟು ದ್ರವ್ಯರಾಶಿ ಮತ್ತು ಮೂರು ಪಟ್ಟು ಗಾತ್ರ ಹೊಂದಿರುತ್ತದೆ ಎಂದು ನಂಬಲಾಗಿದೆ.