ಪಾಕ್ ಶಸ್ತ್ರಗಳಿಗೆ ಭಾರತವನ್ನು ತಡೆಯುವ ಉದ್ದೇಶ: ಅಮೆರಿಕ ಕಾಂಗ್ರೆಸ್‌ನ ವರದಿ
ವಾಶಿಂಗ್ಟನ್, ಜ. 21: ಪಾಕಿಸ್ತಾನದ ಪರಮಾಣು ಬಾಂಬ್‌ಗಳು ಆ ದೇಶದ ವಿರುದ್ಧ ಭಾರತ ಸೇನಾ ಕಾರ್ಯಾಚರಣೆ ನಡೆಸದಂತೆ ತಡೆಯುವ ಉದ್ದೇಶವನ್ನು ಹೊಂದಿವೆ ಎಂದು ಅಮೆರಿಕದ ಕಾಂಗ್ರೆಸ್‌ನ ನೂತನ ವರದಿಯೊಂದು ಹೇಳಿದೆ.
ಪಾಕಿಸ್ತಾನ 110ರಿಂದ 130 ಪರ ಮಾಣು ಬಾಂಬ್‌ಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಅದೇ ವೇಳೆ, ‘‘ಎದುರಾಳಿಯನ್ನು ತಡೆಯುವ’’ ಪಾಕಿಸ್ತಾನದ ಸಿದ್ಧಾಂತವು ದಕ್ಷಿಣ ಏಶ್ಯದ ಈ ಎರಡು ನೆರೆಹೊರೆಯ ರಾಷ್ಟ್ರಗಳ ನಡುವಿನ ಪರಮಾಣು ಸಂಘರ್ಷದ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಅಮೆರಿಕನ್ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.
‘‘ಪಾಕಿಸ್ತಾನದ ಪರಮಾಣು ಬತ್ತ ಳಿಕೆಯಲ್ಲಿ 110ರಿಂದ 130 ಪರ ಮಾಣು ಸಿಡಿತಲೆಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಸಂಖ್ಯೆ ಹೆಚ್ಚಲೂಬಹುದು. ಇಸ್ಲಾಮಾಬಾದ್ ವಿದಳನ ವಸ್ತುಗಳನ್ನು ಉತ್ಪಾದಿಸುತ್ತಿದೆ, ಪರಮಾಣು ಉತ್ಪಾದನಾ ಸ್ಥಾವರಗಳನ್ನು ಮೇಲ್ದರ್ಜೆಗೇರಿಸುತ್ತಿದೆ, ಹೆಚ್ಚೆಚ್ಚು ಪರಮಾಣು ಅಸ್ತ್ರಗಳನ್ನು ನಿಯೋಜಿಸು ತ್ತಿದೆ ಹಾಗೂ ಹೊಸ ಮಾದರಿಯ ಪರಮಾಣು ವಾಹಕಗಳನ್ನು ರೂಪಿಸು ತ್ತಿದೆ’’ ಎಂದು ಕಾಂಗ್ರೆಸ್ ಸಂಶೋಧನಾ ಘಟಕ ತನ್ನ ನೂತನ ವರದಿಯಲ್ಲಿ ತಿಳಿಸಿದೆ.
ಭಾರತ ತನ್ನ ವಿರುದ್ಧ ಸೇನಾ ಕಾರ್ಯಾ ಚರಣೆ ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ ಪಾಕಿಸ್ತಾನ ತನ್ನ ಪರಮಾಣು ಅಸ್ತ್ರಗಳನ್ನು ವಿನ್ಯಾಸ ಗೊಳಿಸಿದೆ ಎಂಬು ದಾಗಿ ವ್ಯಾಪಕವಾಗಿ ಪರಿಗಣಿಸ ಲಾಗಿದೆ ಎಂದು ತನ್ನ 28 ಪುಟಗಳ ವರದಿಯಲ್ಲಿ ಕಾಂಗ್ರೆಸ್ ಹೇಳಿದೆ. ಆದರೆ, ಪಾಕಿಸ್ತಾನ ತನ್ನ ಪರಮಾಣು ಬತ್ತಳಿಕೆಯನ್ನು ಹಿಗ್ಗಿಸುತ್ತಿರುವುದು, ಹೊಸ ಮಾದರಿಯ ಪರಮಾಣು ಅಸ್ತ್ರ ಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಹಾಗೂ ‘‘ಪೂರ್ಣ ಪ್ರಮಾಣದ ತಡೆ’’ ಸಿದ್ಧಾಂತವನ್ನು ಅಂಗೀಕರಿಸುತ್ತಿರುವುದು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪರಮಾಣು ಸಂಘರ್ಷದ ಸಾಧ್ಯತೆಯನ್ನು ಹೆಚ್ಚಿಸಿವೆ ಎಂಬ ಕಳವಳವನ್ನು ವೀಕ್ಷಕರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಂಶೋಧನಾ ಘಟಕವು ಅಮೆರಿಕ ಕಾಂಗ್ರೆಸ್‌ನ ಸ್ವತಂತ್ರ ತನಿಖಾ ವಿಭಾಗವಾಗಿದ್ದು, ತನ್ನ ಸಂಸದರು ಸರಿಯಾದ ನಿರ್ಧಾರಗಳನ್ನು ತೆಗೆದು ಕೊಳ್ಳುವುದಕ್ಕಾಗಿ ವಿವಿಧ ವಿಷಯಗಳ ಬಗ್ಗೆ ಕಾಲ ಕಾಲಕ್ಕೆ ಪರಿಣತರನ್ನು ಬಳಸಿಕೊಂಡು ವರದಿಗಳನ್ನು ಸಿದ್ಧಪಡಿಸಿಕೊಳ್ಳುತ್ತದೆ.
ಅದರ ವರದಿಗಳನ್ನು ಅಮೆರಿಕ ಕಾಂಗ್ರೆಸ್‌ನ ಅಧಿಕೃತ ನಿಲುವು ಎಂಬುದಾಗಿ ಪರಿಗಣಿಸಲಾಗುವುದಿಲ್ಲ.
‘‘ತನ್ನ ಪರಮಾಣು ಶಸ್ತ್ರಗಳ ಸುರಕ್ಷತೆಯ ಮೇಲೆ ಅಂತಾರಾಷ್ಟ್ರೀಯ ನಂಬಿಕೆಯನ್ನು ಹೆಚ್ಚಿಸುವುದಕ್ಕಾಗಿ ಪಾಕಿಸ್ತಾನ ಇತ್ತೀಚಿನ ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ’’ ಎಂದು ಪೌಲ್ ಕೆ. ಕೆರ್ ಮತ್ತು ಮೇರಿ ಬೆತ್ ನಿಕಿಟಿನ್ ಬರೆದಿರುವ ವರದಿ ಹೇಳಿದೆ.