ಭದ್ರತಾ ಪಡೆಯಿಂದ ಯುವಕನ ಹತ್ಯೆ: ದ.ಕಾಶ್ಮೀರ ಬಂದ್
ಶ್ರೀನಗರ,ಜ.21: ಮಂಗಳವಾರ ರಾತ್ರಿ ನೈನಾ ಬಾಟಪೋರ ಗ್ರಾಮದಲ್ಲಿ ನಡೆದ ಉಗ್ರನೋರ್ವನ ಹತ್ಯೆಯನ್ನು ವಿರೋಧಿಸಿ ಬುಧವಾರ ದ.ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪ್ರತಿಭಟನಾನಿರತರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಪರ್ವೇಝ್ ಅಹ್ಮದ್ ಗುರು(25) ಎಂಬಾತ ಕೊಲ್ಲಲ್ಪಟ್ಟಿದ್ದು, ಇದನ್ನು ವಿರೋಧಿಸಿ ದ.ಕಾಶ್ಮೀರದಲ್ಲಿ ಗುರುವಾರ ಬಂದ್ ಆಚರಿಸಲಾಯಿತು. ಮಾರುಕಟ್ಟೆಗಳು,ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಸರಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಎಂದಿನಂತಿತ್ತು. ಬಂದ್ ಹಿನ್ನೆಲೆಯಲ್ಲಿ ಭಾರೀ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಂದ್‌ಗೆ ಕರೆ ನೀಡಿದ್ದ ಕಟ್ಟರ್ ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಗೀಲಾನಿ ಸೇರಿದಂತೆ ಪ್ರತ್ಯೇಕತಾವಾದಿಗಳು ಗುರು ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅತ್ತ ಮಧ್ಯ ಕಾಶ್ಮೀರದಲ್ಲಿಯೂ 1990ರಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಗೋಲಿಬಾರ್‌ನಲ್ಲಿ 52 ನಾಗರಿಕರು ಬಲಿಯಾಗಿದ್ದ ‘ಗಾವ್ಕಾದಲ್ ನರಮೇಧ’ದ 20ನೆಯ ವರ್ಷಾಚರಣೆಯ ಅಂಗವಾಗಿ ಪ್ರತ್ಯೇಕತಾವಾದಿಗಳು ಗುರುವಾರ ಬಂದ್‌ಗೆ ಕರೆ ನೀಡಿದ್ದರು.