ಮತದಾನದ ಗೌಪ್ಯತೆ ಹೆಚ್ಚಿಸಲು ಹೊಸ ಯಂತ್ರದ ಬಳಕೆ
ಕೇಂದ್ರ ಸರಕಾರಕ್ಕೆ ಚು.ಆಯೋಗ ಮನವಿ
ಹೊಸದಿಲ್ಲಿ: ಮತದಾನಗಳ ಬಗ್ಗೆ ಗೌಪ್ಯತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಮತಎಣಿಕೆಗೆ ಅತ್ಯಾಧುನಿಕ ಉಪಕರಣವೊಂದನ್ನು ಅಳವಡಿಸಲು ಚುನಾವಣಾ ನಿಯಮಗಳಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರಕ್ಕೆ ಚುನಾವಣಾ ಆಯೋಗ ಮನವಿ ಮಾಡಿದೆ. ಮತಗಳು ಬಹಿರಂಗವಾಗುವುದನ್ನು ತಡೆಯುವ ಸಲುವಾಗಿ ಇದು ಅನಿವಾರ್ಯ ಎಂದು ಆಯೋಗ ಅಭಿಪ್ರಾಯಿಸಿದೆ.
ಇದೀಗ ಇರುವ ನಿಯಮಗಳ ಪ್ರಕಾರ ಮತಗಟ್ಟೆಗಳಿಗೆ ಅನುಸಾರವಾಗಿ ವಿದ್ಯುನ್ಮಾನ ಮತಯಂತ್ರಗಳು ಮತ ಎಣಿಕೆ ಮಾಡುತ್ತಿವೆ. ವಿವಿಧ ಪ್ರದೇಶಗಳಲ್ಲಿ ಯಾರಿಗೆ ಎಷ್ಟು ಮತಬಿದ್ದಿದೆ ಎಂಬುದು ಇದರಿಂದ ಸುಲಭವಾಗಿ ಗೊತ್ತಾಗುತ್ತದೆ. ಇದೆಲ್ಲವೂ ಕೊನೆಗೆ ಹಿಂಸೆ,ತಾರತಮ್ಯ ಹಾಗೂ ಮತದಾರರಿಗೆ ಬೆದರಿಕೆ ಬೀಳುವುದಕ್ಕೆ ಕಾರಣವಾಗುತ್ತದೆ ಎಂಬ ಆತಂಕವನ್ನು ಆಯೋಗ ವ್ಯಕ್ತಪಡಿಸಿದೆ.
ಇವೆಲ್ಲವನ್ನೂ ನಿಭಾಯಿಸಲು ಇವಿಎಂ ಕಂಪೆನಿಯು ಟೋಟಲೈಸರ್ ಎನ್ನುವ ಹೊಸ ಯಂತ್ರವನ್ನು ಅನ್ವೇಷಿಸಿದೆ. ಪ್ರತ್ಯೇಕವಾಗಿ ಒಂದೊಂದು ಇವಿಎಂಗಳನ್ನು ಬಳಸುವುದಕ್ಕೆ ಬದಲಾಗಿ, ಈ ಉಪಕರಣದ ಮೂಲಕ 14 ಇವಿಎಂಗಳನ್ನು ಜೊತೆಸೇರಿಸಿ ಮತ ಎಣಿಕೆ ಮಾಡಲಾಗುತ್ತದೆ. ಆಗ ತಲಾ ಒಂದೊಂದು ಇವಿಎಂಗಳಲ್ಲಿ ಯಾರಿಗೆ ಎಷ್ಟು ಮತ ಬಿದ್ದಿತ್ತು ಎನ್ನುವ ರಹಸ್ಯ ಬಯಲಾಗುವುದು ತಪ್ಪುತ್ತದೆ.