ದಲಿತರ ಏಳಿಗೆಗೆ ಸರಕಾರ ಬದ್ಧ: ಪ್ರಧಾನಿ ಮೋದಿ
ವಾರಣಾಸಿ,ಜ.22: ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಕುರಿತಂತೆ ತನ್ನ ಸರಕಾರವು ತೀವ್ರ ದಾಳಿಗೆ ಗುರಿಯಾಗಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿಯವರು, ತನ್ನ ಸರಕಾರವು ದಲಿತರು,ಬಡವರು ಮತ್ತು ದಮನಿತರ ಏಳಿಗೆಗೆ ಬದ್ಧವಾಗಿದೆ ಎಂದು ಶುಕ್ರವಾರ ಇಲ್ಲಿ ಹೇಳಿದರು.
ತನ್ನ ಲೋಕಸಭಾ ಕ್ಷೇತ್ರದಲ್ಲಿ ಅಂಗವಿಕಲರಿಗೆ ಅಗತ್ಯ ಸಾಧನಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ದಲಿತರನ್ನು ಪ್ರಸ್ತಾಪಿಸಿದರಾದರೂ ಹೈದರಾಬಾದ್ ವಿವಿಯ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆಯ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ.
ನಮ್ಮ ಸರಕಾರವು ಬಡವರು,ದಲಿತರು,ದಮನಿತರು ಮತ್ತು ಅವಕಾಶ ವಂಚಿತರಿಗಾಗಿ ಅರ್ಪಿತವಾಗಿದೆ ಮತ್ತು ಬದುಕಿನಲ್ಲಿ ಬವಣೆಗೊಳಗಾದವರಿಗಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಿದೆ. ಬಡವರ ಏಳಿಗೆಗಾಗಿ ಮತ್ತು ಅವರ ಬದುಕಿನಲ್ಲಿ ಬದಲಾವಣೆಗಳನ್ನು ತರಲು ಈ ಸರಕಾರವು ಬದ್ಧವಾಗಿದೆ ಮತ್ತು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಮೋದಿ ನುಡಿದರು.
ಎಲ್ಲ ಸಮಯದಲ್ಲಿಯೂ ನಾನು ಭಯಂಕರ ಒತ್ತಡದಲ್ಲಿರುತ್ತೇನೆ ಮತ್ತು ನನ್ನನ್ನು ವಿವಾದಗಳಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಆದರೆ ಬಡವರಿಗಾಗಿ ಶ್ರಮಿಸುವ ನನ್ನ ಕೆಲಸದಿಂದ ನಾನು ವಿಮುಖನಾಗುವುದಿಲ್ಲ ಎಂದರು.
ಬಡವರು ಮತ್ತು ಶೋಷಿತರಿಗೆ ನೆರವಾಗುವುದು ನನ್ನ ಮಂತ್ರವಾಗಿದೆ ಮತ್ತು ಅದಕ್ಕಾಗಿಯೇ ನಾನು ಯಾವುದಕ್ಕೂ ವಿಚಲಿತನಾಗುವುದಿಲ್ಲ. ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಿದ್ದು, ಮಧ್ಯವರ್ತಿಗಳಿಗೆ ಉಳಿಗಾಲವಿಲ್ಲದ್ದರಿಂದ ಇವೆಲ್ಲ ನಡೆಯುತ್ತಿದೆ ಎಂದರು.
ವಿಕಲಾಂಗರತ್ತ ನಮ್ಮ ಮನೋಭಾವ ಬದಲಾಗಬೇಕು. ಅವರನ್ನು ವಿಕಲಾಂಗರು ಎನ್ನುವ ಬದಲು ‘ದಿವ್ಯಾಂಗರು’ಎಂದು ಕರೆಯಬೇಕು. ಅವರ ವೈಕಲ್ಯಗಳ ಬದಲು ಜನರು ದೇವರು ಅವರಿಗೆ ವಿಶೇಷ ಶಕ್ತಿಯನ್ನು ನೀಡಿದ್ದಾನೆ ಎಂದು ಪರಿಗಣಿಸಬೇಕು ಎಂದು ಕರೆ ನೀಡಿದರು.
ಇಂತಹ ಜನರಿಗೆ ಸರಕಾರಿ ಕಚೇರಿಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಅವರ ಬದುಕನ್ನು ಆರಾಮದಾಯಕವಾಗಿಸಲು ‘ಸುಗಮ್ಯ ಭಾರತ್ ಅಭಿಯಾನ’ವನ್ನು ಆರಂಭಿಸುವುದಾಗಿ ಪ್ರಕಟಿಸಿದ ಅವರು, ಇದಕ್ಕಾಗಿ ಅಗತ್ಯವಾದರೆ ಕೆಲವು ನಿಯಮಗಳನ್ನೂ ಬದಲಿಸಬಹುದು ಎಂದರು.
ವಿಕಲಾಂಗರಿಗಾಗಿ ಇನ್ನು ಮುಂದೆ ಪ್ರತಿಯೊಂದೂ ಸರಕಾರಿ ಕಟ್ಟಡದಲ್ಲಿ ರ್ಯಾಂಪ್‌ಗಳು ಮತ್ತು ಶೌಚಾಲಯ ಆಸನ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಅವರು ಪ್ರಕಟಿಸಿದರು.