×
Ad

82ರ ವೃದ್ಧ ನೇತೃತ್ವದಲ್ಲಿ ಕುಟುಂಬದ 100 ಮಂದಿ ಅಂಗಾಂಗ ದಾನ

Update: 2016-01-23 08:50 IST

ಮುಂಬೈ: ಇಲ್ಲಿನ ವಿರಾರ್ ಪ್ರದೇಶ ನಿವಾಸಿ 82 ವರ್ಷದ ಬ್ಯಾಪ್ಟಿಸ್ಟಾ ಲೊಪೆಜ್ ಅವರು ತಾವೇ ಮುಂದೆ ನಿಂತು ಕುಟುಂಬದ ಎಲ್ಲ 100 ಮಂದಿ ತಮ್ಮ ಸಾವಿನ ಬಳಿಕ ಅಂಗಾಂಗ ದಾನ ಹಾಗೂ ದೇಹದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಲು ಪ್ರೇರಣೆಯಾಗಿದ್ದಾರೆ.

ಎಂಬತ್ತು ದಾಟಿದ ಲೊಪೆಜ್ ಹಾಗೂ ಮಗ ಎಲಿಯಾಜ್ (60) ಅವರು ತಮ್ಮ ದೇಹದಾನದ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಸತ್ತ ಬಳಿಕ ದೇಹ ಮಣ್ಣಾಗುವ ಬದಲು ದಾನವಾಗಲಿ ಎಂದು ಅವರು ಬಯಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ಕುಟುಂಬದ ಎಲ್ಲ 100 ಮಂದಿ ಇಂಥದ್ದೇ ವಾಗ್ದಾನ ಮಾಡಿದ್ದಾರೆ.

ಇವರಿಬ್ಬರಲ್ಲದೇ ಕುಟುಂಬದ ಐದು ಮಂದಿ ದೇಹದಾನ ಪ್ರಮಾಣಪತ್ರಕ್ಕೆ ಸಹಿ ಮಾಡಿದ್ದಾರೆ. ಇತರ 60 ಮಂದಿ ಅಂಗಾಂಗ ದಾನ ಪತ್ರಕ್ಕೆ ಸಹಿ ಮಾಡಿದ್ದಾರೆ. ಇತರ 12 ಮಂದಿ ಮಕ್ಕಳು ಕೂಡಾ ಪೋಷಕರ ಒಪ್ಪಿಗೆ ಪಡೆದು ಈ ದಾನಕ್ಕೆ ಮುಂದಾಗಿದ್ದಾರೆ. ಕುಟುಂಬದ ಇತರ ವಿವಾಹಿತ ಹೆಣ್ಣುಮಕ್ಕಳು ಹಾಗೂ ಅಳಿಯಂದಿರು ಕೂಡಾ ಅಂಗಾಂಗ ದಾನದ ವಾಗ್ದಾನ ನೀಡಿದ್ದಾರೆ.
ಎಲಿಯಾಜ್ ಅವರು ಅಂಗಾಂಗ ದಾನದ ಹಲವು ಉಪನ್ಯಾಸಗಳನ್ನು ಕೇಳಿದ್ದಾರೆ.

ಅವರ ಅಜ್ಜ ಬ್ಯಾಸ್ಟೋಸ್ ಅವರ 25ನೇ ಪುಣ್ಯತಿಥಿ ಸಂದರ್ಭದಲ್ಲಿ ಜನವರಿ 10ರಂದು ತಮ್ಮ ನಿವಾಸದಲ್ಲಿ ಈ ಬಗ್ಗೆ ತಜ್ಞರ ಉಪನ್ಯಾಸ ಆಯೋಜಿಸಿದ್ದರು. ನಾವು ಸುಮಾರು 80 ಮಂದಿ ಇದ್ದೇವೆ. ಬಾಪುಸಾಹೇಬ್ ಪಾಟೀಲ್ ಪವಾರ್ ಚಾರಿಟಬಲ್ ಟ್ರಸ್ಟ್‌ನ ಪುರುಷೋತ್ತಮ ಪವಾರ್ ಪಾಟೀಲ್ ಉಪನ್ಯಾಸ ನೀಡಿದರು. ಈ ಉಪನ್ಯಾಸದ ಬಳಿಕ, ದೇಹದಾನ ಮನುಕುಲಕ್ಕೆ ನೀಡುವ ಅತಿದೊಡ್ಡ ಕೊಡುಗೆ ಎಂಬುದು ನಮಗೆ ಮನವರಿಕೆಯಾಯಿತು ಎಂದು ವಿವರಿಸಿದರು.


ಈ ಕುರಿತ ದಾನಪತ್ರಕ್ಕೆ ಸಹಿ ಮಾಡಿದವರಲ್ಲಿ ನಮ್ಮ ತಂದೆ ಮೊದಲಿಗರು ಎಂದು ಎಲಿಯಾಸ್ ಹೇಳಿದರು. ಇದೀಗ ಎಲ್ಲ ಗ್ರಾಮಸ್ಥರಿಗೂ ತಮ್ಮ ಅಂಗಾಂಗ ದಾನ ಮಾಡುವಂತೆ ಪ್ರೋತ್ಸಾಹಿಸಲು ಇವರು ಉದ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News